image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ರಾಜ್ಯ

ಪೌರ ಕಾರ್ಮಿಕರನ್ನು ತರಾಟೆಗೆ ತೆಗೆದುಕೊಂಡ ಸಚಿವ ಕೃಷ್ಣ ಭೈರೇಗೌಡ ನಡೆಗೆ ವ್ಯಾಪಕ ಆಕ್ರೋಶ

ಪೌರ ಕಾರ್ಮಿಕರನ್ನು ತರಾಟೆಗೆ ತೆಗೆದುಕೊಂಡ ಸಚಿವ ಕೃಷ್ಣ ಭೈರೇಗೌಡ ನಡೆಗೆ ವ್ಯಾಪಕ ಆಕ್ರೋಶ

ಬೆಂಗಳೂರು : ಬೆಂಗಳೂರಿನ ಹೊರಮಾವು, ಬಂಜಾರ ಲೇಔಟ್, ಅಗರ ಕೆರೆ, ಜಯಂತಿನಗರ, ರಾಮಮೂರ್ತಿನಗರ ಹಾಗೂ ಕಸ್ತೂರಿನಗರ ಸೇರಿದಂತೆ ವಿವಿಧ ಪ್ರದೇಶಗಳಲ್ಲಿ ಸಚಿವ ಕೃಷ್ಣ ಭೈರೇಗೌಡ ಸ್ವಚ್ಛತೆ, ತ್ಯಾಜ್ಯ ವಿಲೇವಾರಿ, ರಸ್ತೆ ಹಾಗೂ ಪಾದಚಾರಿ ಮಾರ್ಗಗಳ ನಿರ್ವಹಣೆ, ರಾಜಕಾಲುವೆಗಳು ಮತ್ತು ವಿವಿಧ ಮೂಲಸೌಕರ್ಯ ಕಾಮಗಾರಿಗಳ ಕುರಿತು ಪರಿಶೀಲನೆ ನಡೆಸಿದರು. ಈ ವೇಳೆ ತಮ್ಮ ಸೇವೆಯನ್ನು ಖಾಯಂಗೊಳಿಸುವಂತೆ ಆಗ್ರಹಿಸಿ ಮನವಿ ನೀಡಲು ಬಂದ ಪೌರ ಕಾರ್ಮಿಕರ ಸಂಘಟನೆಯ ಪದಾಧಿಕಾರಿಗಳನ್ನು ಸಚಿವರು ತೀವ್ರ ತರಾಟೆಗೆ ತೆಗೆದುಕೊಂಡಿರುವುದು ಸಾರ್ವಜನಿಕ ವಲಯ ಹಾಗೂ ಕಾರ್ಮಿಕ ಸಂಘಟನೆಗಳ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.

ಪರಿಶೀಲನೆ ವೇಳೆ ಪೌರ ಕಾರ್ಮಿಕರ ಖಾಯಮಾತಿ ಮನವಿಗೆ ತೀವ್ರ ಅಸಮಾಧಾನದಿಂದ ಪ್ರತಿಕ್ರಿಯಿಸಿದ ಸಚಿವರು, ಸುಮಾರು ಶೇ. 30 ರಷ್ಟು ಪೌರ ಕಾರ್ಮಿಕರು ಕೆಲಸಕ್ಕೆ ಸರಿಯಾಗಿ ಹಾಜರಾಗುತ್ತಲೇ ಇಲ್ಲ. ಇನ್ನು ಕೆಲವರು ಕೆಲಸಕ್ಕೆ ಬಂದರೂ ಮನೆ-ಮನೆಗೆ ತೆರಳಿ ಕಸ ಸಂಗ್ರಹಿಸುತ್ತಿಲ್ಲ, ಇದರಿಂದಾಗಿ ಅನಿವಾರ್ಯವಾಗಿ ಜನರು ರಸ್ತೆಗಳಿಗೆ ಕಸ ಎಸೆಯುತ್ತಿದ್ದು, ನಗರದ ಹಲವು ಪ್ರದೇಶಗಳು ಗಬ್ಬು ನಾರುತ್ತಿವೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಕಾರ್ಮಿಕರ ಈ ನಿರ್ಲಕ್ಷ್ಯದಿಂದಾಗಿ ನಾವು ಸಾರ್ವಜನಿಕರಿಂದ ಬೈಸಿಕೊಳ್ಳುವಂತಾಗಿದೆ, ಹೀಗಿರುವಾಗ ಸರಿಯಾಗಿ ಕೆಲಸ ಮಾಡದವರನ್ನು ಏತಕ್ಕಾಗಿ ಖಾಯಂಗೊಳಿಸಬೇಕು ಎಂದು ಕಟುವಾಗಿ ಪ್ರಶ್ನಿಸಿದರು.

ಸಚಿವರ ಈ ವರ್ತನೆಗೆ ಪೌರ ಕಾರ್ಮಿಕರ ಸಂಘಟನೆಗಳ ಪದಾಧಿಕಾರಿಗಳು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಕಾರ್ಮಿಕರ ನ್ಯಾಯಯುತ ಮನವಿಯನ್ನು ಸ್ವೀಕರಿಸಿ ಸರ್ಕಾರದ ಗಮನಕ್ಕೆ ತರುವ ಬದಲು, ಅವರ ವಿರುದ್ಧವೇ ಟೀಕೆ ಮಾಡಿರುವುದು ಸರಿಯಾದ ನಡವಳಿಕೆಯಲ್ಲ ಎಂದು ಕಿಡಿಕಾರಿದ್ದಾರೆ. ಪೌರ ಕಾರ್ಮಿಕರ ಸಂಘದ ಮುಖಂಡ ಎಸ್. ಮೂರ್ತಿ ಪ್ರತಿಕ್ರಿಯಿಸಿ, ಸಂವೇದನಾಶೀಲರಾದ ಸಚಿವ ಕೃಷ್ಣ ಭೈರೇಗೌಡರು, ತಮ್ಮ ಹಕ್ಕುಗಳಿಗಾಗಿ ಮನವಿ ಕೊಡಲು ಬಂದ ಸ್ವಚ್ಛತಾ ಕಾರ್ಮಿಕರನ್ನೇ ಈ ರೀತಿ ತರಾಟೆಗೆ ತೆಗೆದುಕೊಂಡಿರುವುದು ಅವರಿಗೆ ಶೋಭೆ ತರುವುದಿಲ್ಲ ಎಂದಿದ್ದಾರೆ.

Category
ಕರಾವಳಿ ತರಂಗಿಣಿ