ಚಿಕ್ಕಮಗಳೂರು: ಜನರ ಸಮಸ್ಯೆಗಳಿಗೆ ಸದಾ ಸ್ಪಂದಿಸಿ ಅವರ ಮನಸ್ಸಿನಲ್ಲಿ ನೆಲೆಸಿದಾಗ ಮಾತ್ರ ನಿಜವಾದ ನಾಯಕರಾಗಲು ಸಾಧ್ಯ ಎಂದು ಮಾಜಿ ಸಚಿವ ಹಾಗೂ ಶಾಸಕ ಡಾ. ಸಿ.ಟಿ. ರವಿ ಹೇಳಿದ್ದಾರೆ. ನಗರದ ಜಿಲ್ಲಾ ಬಿಜೆಪಿ 'ಪಾಂಚಜನ್ಯ' ಕಾರ್ಯಾಲಯದಲ್ಲಿ ಆಯೋಜಿಸಲಾಗಿದ್ದ ನಗರ ಬಿಜೆಪಿ ಮಂಡಲ ಕಾರ್ಯಕಾರಿ ಸಭೆಯಲ್ಲಿ ಅವರು ಮಾತನಾಡಿದರು.
ಸಂಘಟನೆಯನ್ನು ಸದೃಢಗೊಳಿಸಲು ಜನಪರ ಕಾರ್ಯಕ್ರಮಗಳನ್ನು ರೂಪಿಸಿ ಜನರ ಬಳಿಗೆ ನೇರವಾಗಿ ತಲುಪಿಸುವುದು ಅತ್ಯಗತ್ಯ ಎಂದು ಅವರು ಕಾರ್ಯಕರ್ತರಿಗೆ ಕರೆ ನೀಡಿದರು. ಮತದಾರರ ಪಟ್ಟಿಯ ಜಾಗೃತಿ ಕುರಿತು ಮಾತನಾಡಿದ ಅವರು, ಪ್ರತಿಯೊಬ್ಬರೂ ಎಸ್.ಐ.ಆರ್ ಮತದಾರರ ಕರಡು ಪ್ರತಿಯಲ್ಲಿ ತಮ್ಮ ಹಾಗೂ ತಮ್ಮ ಕುಟುಂಬದವರ ಹೆಸರುಗಳಿವೆಯೇ ಎಂಬುದನ್ನು ಕಡ್ಡಾಯವಾಗಿ ಪರಿಶೀಲಿಸಿಕೊಳ್ಳಬೇಕು. ಪ್ರಪಂಚದ ಎಲ್ಲಾ ವಿಷಯಗಳನ್ನು ಗಮನಿಸುವ ನಾವು, ನಮ್ಮ ಸ್ವಂತ ಹಕ್ಕುಗಳು ಹಾಗೂ ಮಾಹಿತಿಯ ಕುರಿತು ನಿರ್ಲಕ್ಷ್ಯ ವಹಿಸಬಾರದು ಎಂದು ಕಿವಿಮಾತು ಹೇಳಿದರು.
ಇದೇ ವೇಳೆ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಬಿಜೆಪಿ ಆಡಳಿತಾವಧಿಯಲ್ಲಿ ಕೈಗೆತ್ತಿಕೊಳ್ಳಲಾಗಿದ್ದ ಜಿ+2 ಆಶ್ರಯ ಯೋಜನೆಯ ಹಣ ಬಿಡುಗಡೆಯಾಗದ ಕಾರಣ ಕಾಮಗಾರಿಗಳು ಸ್ಥಗಿತಗೊಂಡಿವೆ ಎಂದರು. ಹಿಂದಿನ ಬಿಜೆಪಿ ಸರ್ಕಾರದ ಅಭಿವೃದ್ಧಿ ಕೆಲಸಗಳನ್ನು ಪ್ರಸ್ತುತ ತಾವೇ ಮಾಡುತ್ತಿದ್ದೇವೆ ಎಂದು ಕೆಲವರು ಸುಳ್ಳು ಪ್ರಚಾರ ಪಡೆಯುತ್ತಿದ್ದು, ಈ ಕುರಿತು ಸಾರ್ವಜನಿಕರಿಗೆ ಸರಿಯಾದ ವಾಸ್ತವ ಸಂಗತಿಗಳನ್ನು ತಲುಪಿಸಬೇಕು ಎಂದು ಮನವಿ ಮಾಡಿದರು. ಈ ಸಭೆಯಲ್ಲಿ ಎಸ್.ಐ.ಆರ್ ಬಿಎಲ್‌ಎ-1 ಸೀತಾರಾಮಭರಣ್ಯ, ನಗರ ಮಂಡಲ ಅಧ್ಯಕ್ಷ ಕೆ.ಎಸ್. ಪುಷ್ಪರಾಜ್ ಹಾಗೂ ಉಸ್ತುವಾರಿ ಚಿಕ್ಕದೇವನೂರು ರವಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.