ಚಿತ್ರದುರ್ಗ: ಬರಪೀಡಿತ ಚಿತ್ರದುರ್ಗ ಜಿಲ್ಲೆಯ ಜನರ ದಶಕಗಳ ಕನಸಾದ ಭದ್ರಾ ಮೇಲ್ದಂಡೆ ಯೋಜನೆಯಡಿ ಶಾಖಾ ನಾಲೆಗೆ (ಸಿಬಿಸಿ) ಪ್ರಾಯೋಗಿಕವಾಗಿ ನೀರು ಹರಿಸಲು ವಿಶ್ವೇಶ್ವರಯ್ಯ ಜಲ ನಿಗಮ ಸಕಲ ಸಿದ್ಧತೆ ಮಾಡಿಕೊಂಡಿದ್ದು, ಸೆಪ್ಟೆಂಬರ್ 6ರಿಂದ ಕೋಟೆನಾಡಿನತ್ತ ಭದ್ರೆ ತನ್ನ ಪ್ರಯಾಣ ಆರಂಭಿಸಲಿದ್ದಾಳೆ. ಯೋಜನೆಗಾಗಿ ತಯಾರಿಸಿದ ಕಾಲುವೆ ಕಾಮಗಾರಿ ಪೂರ್ಣಗೊಂಡಿರುವ ಹಿನ್ನೆಲೆಯಲ್ಲಿ ಸರ್ಕಾರ ನೀರು ಹರಿಸುವ ವೇಳಾಪಟ್ಟಿಯನ್ನು ಪ್ರಕಟಿಸಿದ್ದು, ಈ ಮೂಲಕ ಜಿಲ್ಲೆಯ ರೈತರು ಹಾಗೂ ಸಾರ್ವಜನಿಕರಲ್ಲಿ ಸಂಭ್ರಮದ ವಾತಾವರಣ ಮನೆಮಾಡಿದೆ.
ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲ್ಲೂಕಿನ ಆರಬಾಲ ಗ್ರಾಮದಿಂದ ಆರಂಭಗೊಳ್ಳುವ ಚಿತ್ರದುರ್ಗ ಶಾಖಾ ನಾಲೆಯ 0 ಕಿ.ಮೀ.ಯಿಂದ 114.142 ಕಿ.ಮೀವರೆಗೆ (ಗೋನೂರು ಕೆರೆ) ನೀರು ಹರಿದು ಬರಲಿದೆ. ಈ ನೀರು ಹೊಸದುರ್ಗ, ಹೊಳಲ್ಕೆರೆ, ಹಿರಿಯೂರು ಮತ್ತು ಚಿತ್ರದುರ್ಗ ತಾಲ್ಲೂಕುಗಳ ಮೂಲಕ ಹಾದು ಗೋನೂರು ಕೆರೆ ತಲುಪಲಿದ್ದು, ಮುಂದಿನ ಹಂತದಲ್ಲಿ ನೈಸರ್ಗಿಕ ಹಳ್ಳದ ಮುಖಾಂತರ ಚಳ್ಳಕೆರೆ ತಾಲ್ಲೂಕಿನ ರಾಣೇಕೆರೆವರೆಗೆ ಹರಿಯಲಿದೆ. ಯೋಜನೆಯಿಂದ ಜಿಲ್ಲೆಯ ಒಟ್ಟು 367 ಕೆರೆಗಳನ್ನು ತುಂಬಿಸಲು ಯೋಜನೆ ರೂಪಿಸಲಾಗಿದ್ದು, ಸೆಪ್ಟೆಂಬರ್ 6ರಂದು ಬಿಡುಗಡೆಯಾಗುವ ನೀರು ಸೆಪ್ಟೆಂಬರ್ 8ರ ರಾತ್ರಿ ಅಥವಾ 9ರ ಬೆಳಿಗ್ಗೆ ಗೋನೂರು ಕೆರೆ ತಲುಪುವ ಸಾಧ್ಯತೆಯಿದೆ.
ನಾಲೆಯಲ್ಲಿ ನೀರು ಹರಿಯಲಿರುವ ಹಿನ್ನೆಲೆಯಲ್ಲಿ ಸಾರ್ವಜನಿಕ ಸುರಕ್ಷತೆಯ ಹಿತದೃಷ್ಟಿಯಿಂದ ವಿಶ್ವೇಶ್ವರಯ್ಯ ಜಲ ನಿಗಮವು ಕಟ್ಟುನಿಟ್ಟಿನ ಮುಂಜಾಗ್ರತಾ ಎಚ್ಚರಿಕೆಗಳನ್ನು ನೀಡಿದೆ. ನಾಲಾ ಪಾತ್ರದ ಸಾರ್ವಜನಿಕರು ಹಾಗೂ ಯುವಜನರು ಕಾಲುವೆ ಅಥವಾ ಹಳ್ಳಗಳಲ್ಲಿ ಈಜಾಡುವುದು, ಜನ-ಜಾನುವಾರುಗಳನ್ನು ಕಾಲುವೆಗೆ ಬಿಡುವುದು, ಅನಧಿಕೃತವಾಗಿ ಪಂಪ್‌ಸೆಟ್‌ಗಳಿಂದ ನೀರು ಎತ್ತುವುದು ಹಾಗೂ ನಿಗಮದ ಆಸ್ತಿಗೆ ಹಾನಿ ಮಾಡುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಈ ಸೂಚನೆಗಳನ್ನು ಉಲ್ಲಂಘಿಸುವವರ ವಿರುದ್ಧ ನೀರಾವರಿ ಕಾಯ್ದೆಯಡಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಅಧೀಕ್ಷಕ ಎಂಜಿನಿಯರ್ ಕೆ.ಟಿ. ಹರೀಶ್ ಎಚ್ಚರಿಸಿದ್ದಾರೆ.
ಐದು ದಶಕಗಳ ಹೋರಾಟದ ಫಲವಾಗಿ ನೀರು ಹರಿಯುತ್ತಿರುವುದು ಜಿಲ್ಲೆಯ ಕೃಷಿ ಹಾಗೂ ಕುಡಿಯುವ ನೀರಿನ ಅಭಾವಕ್ಕೆ ದೊಡ್ಡ ಪರಿಹಾರ ಒದಗಿಸಲಿದ್ದು, ಭದ್ರಾ ಹೋರಾಟ ಸಮಿತಿ ಹಾಗೂ ಜಿಲ್ಲಾ ನೀರಾವರಿ ಹೋರಾಟ ಸಮಿತಿ ನೀರು ಹರಿದುಬರುವ ಕ್ಷಣವನ್ನು ಸಂಭ್ರಮಿಸಲು ಸಿದ್ಧತೆ ನಡೆಸಿವೆ. ನೀರು ಹರಿವಿನ ದಿನಾಂಕ ಪ್ರಕಟಿಸಿದ ಮುಖ್ಯಮಂತ್ರಿ ಹಾಗೂ ಜಲಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್ ಅವರಿಗೆ ಧನ್ಯವಾದ ಸಲ್ಲಿಸಿರುವ ಜಿಲ್ಲಾ ಉಸ್ತುವಾರಿ ಸಚಿವ ಟಿ. ರಘುಮೂರ್ತಿ, ಶೀಘ್ರದಲ್ಲೇ ಜಲಸಂಪನ್ಮೂಲ ಸಚಿವರು ನೀರು ಹರಿವನ್ನು ವೀಕ್ಷಿಸಲಿದ್ದು, ಅಂದು ಬೃಹತ್ ಕಾರ್ಯಕ್ರಮ ಆಯೋಜಿಸಲಾಗುವುದು ಎಂದು ತಿಳಿಸಿದ್ದಾರೆ.