image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ರಾಜ್ಯ

ಅಕ್ರಮ ಮದರಸಾಗೆ ನೀಡಿದ್ದ ₹5 ಲಕ್ಷ ಅನುದಾನ ವಾಪಸ್ ಪಡೆಯಲು ಹೈಕೋರ್ಟ್ ಕಟ್ಟುನಿಟ್ಟಿನ ಆದೇಶ

ಅಕ್ರಮ ಮದರಸಾಗೆ ನೀಡಿದ್ದ ₹5 ಲಕ್ಷ ಅನುದಾನ ವಾಪಸ್ ಪಡೆಯಲು ಹೈಕೋರ್ಟ್ ಕಟ್ಟುನಿಟ್ಟಿನ ಆದೇಶ

ಬೆಂಗಳೂರು : ರಾಜ್ಯದಲ್ಲಿ ನೋಂದಣಿಯಾಗದ ಮದರಸಾಗಳಿಗೆ ನಿಯಮಬಾಹಿರವಾಗಿ ಸರ್ಕಾರದ ಅನುದಾನ ಹಂಚಿಕೆ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ನಾಟಕ ಹೈಕೋರ್ಟ್ ರಾಜ್ಯ ಸರ್ಕಾರ ಹಾಗೂ ಅಲ್ಪಸಂಖ್ಯಾತ ಕಲ್ಯಾಣ ಇಲಾಖೆಗೆ ಬಿಸಿ ಮುಟ್ಟಿಸಿದೆ. ಬೆಂಗಳೂರಿನ ಥಣಿಸಂದ್ರದಲ್ಲಿರುವ ನೋಂದಣಿಯಾಗದ 'ಜಾಮಿಯಾ ಮೊಹಮ್ಮದ್ದಿಯಾ ಮನ್ಸೂರಾ' ಮದರಸಾಗೆ ನೀಡಲಾಗಿದ್ದ ₹5 ಲಕ್ಷ ಅನುದಾನವನ್ನು ತಕ್ಷಣವೇ ಹಿಂಪಡೆಯುವಂತೆ ಹೈಕೋರ್ಟ್ ವಿಭಾಗೀಯ ಪೀಠ ಆದೇಶಿಸಿದೆ. 

ಬೆಂಗಳೂರಿನ ಥಣಿಸಂದ್ರದಲ್ಲಿ ಕಾರ್ಯಾಚರಿಸುತ್ತಿರುವ ಈ ಮದರಸಾ ಯಾವುದೇ ಅಧಿಕೃತ ನೋಂದಣಿ ಇಲ್ಲದಿದ್ದರೂ ನಿಯಮಗಳನ್ನು ಗಾಳಿಗೆ ತೂರಿ ನಡೆಯುತ್ತಿತ್ತು. ಅಷ್ಟೇ ಅಲ್ಲದೆ ಸರ್ಕಾರಕ್ಕೆ ಸುಳ್ಳು ಮತ್ತು ದಾರಿ ತಪ್ಪಿಸುವ ಮಾಹಿತಿಗಳನ್ನು ನೀಡಿ, ಅಲ್ಪಸಂಖ್ಯಾತ ಕಲ್ಯಾಣ ಇಲಾಖೆಯಿಂದ ಬರೋಬ್ಬರಿ ₹5 ಲಕ್ಷ ಅನುದಾನವನ್ನು ಅಕ್ರಮವಾಗಿ ಪಡೆದುಕೊಂಡಿತ್ತು. ಈ ಅಕ್ರಮದ ವಿರುದ್ಧ ಅಬ್ದುಲ್ ಹಮೀದ್ ಪಾಷಾ ಹಾಗೂ ಪ್ರದೀಪ್ ಸಿಂಹ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ (PIL) ವಿಚಾರಣೆ ನಡೆಸಿದ ನ್ಯಾಯಮೂರ್ತಿ ಜಯಂತ್ ಬ್ಯಾನರ್ಜಿ ಮತ್ತು ನ್ಯಾಯಮೂರ್ತಿ ಟಿ.ಎಂ. ನದಾಫ್ ಅವರನ್ನೊಳಗೊಂಡ ವಿಭಾಗೀಯ ಪೀಠವು ಸರ್ಕಾರದ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.

ಕಾನೂನುಬಾಹಿರವಾಗಿ ನೀಡಲಾದ ₹5 ಲಕ್ಷ ಅನುದಾನವನ್ನು ಕೂಡಲೇ ವಾಪಸ್ ಪಡೆಯಬೇಕು ಮತ್ತು ಆ ಹಣ ವಸೂಲಿಗೆ ಕೈಗೊಂಡ ಕ್ರಮಗಳ ಕುರಿತು ಮುಂದಿನ ವಿಚಾರಣೆ ವೇಳೆ ಸಮಗ್ರ ತನಿಖಾ ವರದಿ ಸಲ್ಲಿಸಬೇಕು ಎಂದು ಪೀಠ ನಿರ್ದೇಶಿಸಿದೆ. ಇದರ ಜೊತೆಗೆ, ರಾಜ್ಯಾದ್ಯಂತ ಸುಳ್ಳು ಮಾಹಿತಿ ನೀಡಿ ಸರ್ಕಾರದ ಅನುದಾನ ಪಡೆಯುತ್ತಿರುವ ವಂಚಕ ಸಂಸ್ಥೆಗಳ ವಿರುದ್ಧ ತನಿಖೆ ನಡೆಸಿ ಆ ಮಾಹಿತಿಯನ್ನೂ ನ್ಯಾಯಾಲಯಕ್ಕೆ ಸಲ್ಲಿಸುವಂತೆ ಸೂಚಿಸಲಾಗಿದೆ.

ಮುಂದಿನ ವಿಚಾರಣೆ ವೇಳೆಗೆ ಸಮರ್ಪಕ ತನಿಖಾ ವರದಿ ಮತ್ತು ಕ್ರಮ ಕೈಗೊಂಡ ವಿವರಗಳನ್ನು ಸಲ್ಲಿಸದಿದ್ದರೆ ಅದನ್ನು ಗಂಭೀರ 'ನ್ಯಾಯಾಂಗ ನಿಂದನೆ' ಎಂದು ಪರಿಗಣಿಸಲಾಗುವುದು ಹಾಗೂ ಅಲ್ಪಸಂಖ್ಯಾತ ಕಲ್ಯಾಣ ಇಲಾಖೆಯ ನಿರ್ದೇಶಕರು ಸ್ವತಃ ನ್ಯಾಯಾಲಯಕ್ಕೆ ಖುದ್ದು ಹಾಜರಾಗಬೇಕಾಗುತ್ತದೆ ಎಂದು ಹೈಕೋರ್ಟ್ ಎಚ್ಚರಿಕೆ ನೀಡಿದ್ದು, ಪ್ರಕರಣದ ಮುಂದಿನ ವಿಚಾರಣೆಯನ್ನು ಸೆಪ್ಟೆಂಬರ್ 24ಕ್ಕೆ ಮುಂದೂಡಿದೆ.

Category
ಕರಾವಳಿ ತರಂಗಿಣಿ