ಬೆಂಗಳೂರು: ಆನೇಕಲ್ ತಾಲೂಕಿನ ಸೂರ್ಯನಗರ 4ನೇ ಹಂತದಲ್ಲಿ ಕರ್ನಾಟಕ ಗೃಹ ಮಂಡಳಿ (KHB) ನಿರ್ಮಿಸಲು ಉದ್ದೇಶಿಸಿರುವ ಹೈಟೆಕ್ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದ ಮೂಲಸೌಕರ್ಯ ಕಾಮಗಾರಿಯ ಟೆಂಡರ್ ಪ್ರಕ್ರಿಯೆ ಅಧಿಕೃತವಾಗಿ ಅಂತಿಮಗೊಂಡಿದೆ. ಸೂರ್ಯನಗರ 4ನೇ ಹಂತದ ವಸತಿ ಯೋಜನೆಗಾಗಿ ಗೃಹ ಮಂಡಳಿ ಸ್ವಾಧೀನಪಡಿಸಿಕೊಂಡಿದ್ದ 1,938.13 ಎಕರೆ ಜಮೀನಿನ ಭೂಸ್ವಾಧೀನ ಪ್ರಕ್ರಿಯೆಯನ್ನು ಹೈಕೋರ್ಟ್ ರದ್ದುಗೊಳಿಸಿದ್ದರೂ, ಅದೇ ವ್ಯಾಪ್ತಿಯ 75 ಎಕರೆ ಪ್ರದೇಶದಲ್ಲಿ ಸುಮಾರು 80,000 ಆಸನಗಳ ಸಾಮರ್ಥ್ಯದ ಕ್ರೀಡಾಂಗಣ ನಿರ್ಮಾಣ ಪ್ರಕ್ರಿಯೆ ಮುಂದುವರಿದಿದೆ.
ಈ ಬೃಹತ್ ಕ್ರೀಡಾಂಗಣ ನಿರ್ಮಾಣಕ್ಕೆ ಒಟ್ಟು 1,241 ಕೋಟಿ ರೂಪಾಯಿಗಳ ಯೋಜನಾ ವೆಚ್ಚವನ್ನು ಅಂದಾಜಿಸಲಾಗಿದ್ದು, ಮೇ 23ರಂದು ಶಂಕುಸ್ಥಾಪನೆ ನೆರವೇರಿಸಲಾಗಿತ್ತು. ಕ್ರೀಡಾಂಗಣದ ಮೂಲಸೌಕರ್ಯ ಕಾಮಗಾರಿಗಳಿಗಾಗಿ 943.46 ಕೋಟಿ ರೂ.ಗಳ ಅಂದಾಜು ವೆಚ್ಚದೊಂದಿಗೆ ಆಹ್ವಾನಿಸಲಾಗಿದ್ದ ಟೆಂಡರ್ ಪ್ರಕ್ರಿಯೆಯಲ್ಲಿ ಮುಂಬೈನ 'ಜೆ ಕುಮಾರ್ ಇನ್‌ಫ್ರಾ ಪ್ರಾಜೆಕ್ಟ್ಸ್ ಲಿಮಿಟೆಡ್' ಸಂಸ್ಥೆಯು 1,127.90 ಕೋಟಿ ರೂ. ಬಿಡ್ ಸಲ್ಲಿಸಿ, ಅಂತಿಮವಾಗಿ 990.16 ಕೋಟಿ ರೂ.ಗಳ ಮೊತ್ತಕ್ಕೆ ಗುತ್ತಿಗೆ ಪಡೆದುಕೊಂಡಿದೆ. ಸ್ಪರ್ಧೆಯಲ್ಲಿದ್ದ ಎನ್‌ಸಿಸಿ ಲಿಮಿಟೆಡ್ 1,225.55 ಕೋಟಿ ರೂ.ಗಳ ಬಿಡ್ ಸಲ್ಲಿಸಿತ್ತು. ಆದಾಗ್ಯೂ, ಗುತ್ತಿಗೆ ಸಂಸ್ಥೆಗೆ ಇನ್ನೂ ಅಧಿಕೃತ ಕಾರ್ಯಾದೇಶ (ವರ್ಕ್ ಆರ್ಡರ್) ನೀಡದ ಕಾರಣ ಸ್ಥಳದಲ್ಲಿ ಕಾಮಗಾರಿ ಇನ್ನೂ ಆರಂಭವಾಗಿಲ್ಲ.
ಅಹಮದಾಬಾದ್ ನರೇಂದ್ರ ಮೋದಿ ಕ್ರೀಡಾಂಗಣದ ನಂತರ ದೇಶದಲ್ಲೇ ಎರಡನೇ ಅತಿದೊಡ್ಡ ಕ್ರಿಕೆಟ್ ಕ್ರೀಡಾಂಗಣವೆನಿಸಿಕೊಳ್ಳಲಿರುವ ಈ ಯೋಜನೆಗೆ ರಾಜ್ಯ ಸರ್ಕಾರದಿಂದ ಯಾವುದೇ ಪ್ರತ್ಯೇಕ ಅನುದಾನ ದೊರೆಯುತ್ತಿಲ್ಲ. ಕರ್ನಾಟಕ ಗೃಹ ಮಂಡಳಿಯು ತನ್ನ ಸ್ವತ್ತುಗಳಾದ ನಿವೇಶನ ಹಾಗೂ ಮನೆಗಳ ಮಾರಾಟದಿಂದ ಬರುವ ಸ್ವಂತ ಸಂಪನ್ಮೂಲಗಳನ್ನು ಕ್ರೋಢೀಕರಿಸಿ ಸಂಪೂರ್ಣ ವೆಚ್ಚವನ್ನು ಭರಿಸಲು ಉದ್ದೇಶಿಸಿದೆ. ಯೋಜನೆಯ ಒಟ್ಟು 75 ಎಕರೆ ಭೂಮಿಯ ಪೈಕಿ ಇಂಡ್ಲವಾಡಿ ಗ್ರಾಮದಲ್ಲಿ ಈಗಾಗಲೇ ಸ್ವಾಧೀನಪಡಿಸಿಕೊಂಡಿರುವ ಜಮೀನಿನಲ್ಲಿ 53 ಎಕರೆ 14 ಗುಂಟೆ ಜಾಗವನ್ನು ಕಾಯ್ದಿರಿಸಲಾಗಿದ್ದು, ಬಾಕಿ ಇರುವ 21 ಎಕರೆ 26 ಗುಂಟೆ ಭೂಸ್ವಾಧೀನಕ್ಕಾಗಿ ಅಂತಿಮ ಅಧಿಸೂಚನೆ ಹೊರಡಿಸುವ ಪ್ರಕ್ರಿಯೆಗಳು ಪ್ರಗತಿಯಲ್ಲಿವೆ.
ಆದರೆ, ಈ ಯೋಜನೆಯ ಸುತ್ತಲೂ ಈಗ ಕಾನೂನು ಮತ್ತು ಪರಿಸರ ಆತಂಕಗಳು ಎದುರಾಗಿವೆ. ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನದ 268.96 ಚದರ ಕಿ.ಮೀ ಪರಿಸರ ಸೂಕ್ಷ್ಮ ವಲಯದ (ESZ) ವ್ಯಾಪ್ತಿಯಲ್ಲಿ ಈ ಯೋಜನೆಯ ಭೂಮಿ ಬರುವುದರಿಂದ, ವನ್ಯಜೀವಿಗಳು ಮತ್ತು ಸೂಕ್ಷ್ಮ ಪರಿಸರದ ಮೇಲೆ ಇದು ತೀವ್ರ ಪರಿಣಾಮ ಬೀರಲಿದೆ. ಕೇಂದ್ರೀಯ ಅಧಿಕಾರ ಸಮಿತಿ (CEC) ಸೂಚಿಸಿದಂತೆ ಸೂಕ್ತ ಪರಿಸರ ಪ್ರಭಾವದ ವೈಜ್ಞಾನಿಕ ಅಧ್ಯಯನ ಮತ್ತು ಸಾಮಾಜಿಕ-ಪರಿಸರ ಅಂಶಗಳನ್ನು ಪರಿಗಣಿಸದೆ ಭೂಸ್ವಾಧೀನ ನಡೆಸಲಾಗಿದೆ ಎಂಬ ಕಾರಣಕ್ಕೆ ಹೈಕೋರ್ಟ್ ಇಡೀ ಯೋಜನೆಯ ಭೂಸ್ವಾಧೀನವನ್ನು ರದ್ದುಗೊಳಿಸಿರುವುದರಿಂದ, ಕ್ರೀಡಾಂಗಣ ನಿರ್ಮಾಣದ ಭವಿಷ್ಯದ ಕುರಿತು ಆತಂಕ ಮೂಡಿದೆ.