ವಿಜಯನಗರ : ವಿಜಯನಗರ ಜಿಲ್ಲೆಯ ಕೂಡ್ಲಿಗಿಯಲ್ಲಿ 'ಬಾಗಿಲಿಗೆ ಬಂದಿದೆ ನಿಮ್ಮ ಸರ್ಕಾರ, ಸೇವೆಗಿರಲಿ ನಿಮ್ಮ ಸಹಕಾರ' ಎಂಬ ಧ್ಯೇಯವಾಕ್ಯದೊಂದಿಗೆ 'ಪ್ರಜಾಸೇವಾ ಅಭಿಯಾನ' ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ರಾಜ್ಯದ ಶಿಕ್ಷಣ ಕ್ಷೇತ್ರ ಹಾಗೂ ಸಾರ್ವಜನಿಕ ಆಡಳಿತಕ್ಕೆ ಸಂಬಂಧಿಸಿದಂತೆ ಹಲವು ಮಹತ್ವದ ನಿರ್ಧಾರಗಳನ್ನು ಪ್ರಕಟಿಸಿದರು. ಅಕ್ಷರ ಸೇವೆಯೇ ಪರಮಾತ್ಮನ ಸೇವೆ ಎಂದ ಅವರು, ಸಮಾಜವನ್ನು ತಿದ್ದಿ ತೀಡುವ ಶಿಕ್ಷಕರ ಗೌರವ ಹೆಚ್ಚಿಸಲು, ವೈದ್ಯರ ಹೆಸರಿನ ಮುಂದೆ 'Dr' ಎಂದು ಬಳಸುವ ಮಾದರಿಯಲ್ಲೇ ಇನ್ಮುಂದೆ ಪ್ರತಿಯೊಬ್ಬ ಶಿಕ್ಷಕರ ಹೆಸರಿನ ಮುಂದೆಯೂ ಗೌರವಾರ್ಥವಾಗಿ 'Tr' (ಟಿಆರ್) ಎಂದು ಸಂಬೋಧಿಸಲು ಸರ್ಕಾರ ತೀರ್ಮಾನಿಸಿದೆ ಎಂದು ತಿಳಿಸಿದರು. ಇದೇ ವೇಳೆ ಬಡ ಹಾಗೂ ಗ್ರಾಮೀಣ ಪ್ರತಿಭೆಗಳಿಗೆ ಶಕ್ತಿ ತುಂಬಲು ಸರ್ಕಾರಿ ಶಾಲೆಗಳಲ್ಲಿ ಓದುವ ಮಕ್ಕಳಿಗೆ ಶಿಕ್ಷಣ ಮತ್ತು ಉದ್ಯೋಗದಲ್ಲಿ ಶೇಕಡಾ 7ರಷ್ಟು ಆಂತರಿಕ ಮೀಸಲಾತಿ ನೀಡಲು ಸಚಿವ ಸಂಪುಟ ಸಭೆಯಲ್ಲಿ ನಿರ್ಧರಿಸಲಾಗಿದ್ದು, ಶೀಘ್ರದಲ್ಲೇ ಇದರ ಜಾರಿಯ ರೂಪುರೇಷೆಯನ್ನು ಪ್ರಕಟಿಸಲಾಗುವುದು ಎಂದರು.
ಜನರ ಕುಂದುಕೊರತೆಗಳನ್ನು ಸ್ಥಳದಲ್ಲೇ ಪರಿಹರಿಸುವ 'ಪ್ರಜಾಸೇವಾ ಅಭಿಯಾನ'ದಡಿ ಪ್ರತಿ ತಿಂಗಳ ಮೊದಲನೇ ಮತ್ತು ಮೂರನೇ ಶನಿವಾರ ಜಿಲ್ಲಾ ಮಂತ್ರಿಗಳು, ಶಾಸಕರು ಹಾಗೂ ಅಧಿಕಾರಿಗಳು ನೇರವಾಗಿ ಗ್ರಾಮ ಪಂಚಾಯಿತಿ, ಹೋಬಳಿ ಮತ್ತು ತಾಲೂಕು ಮಟ್ಟಕ್ಕೆ ತೆರಳಿ ಜನರ ಸಮಸ್ಯೆಗಳನ್ನು ಆಲಿಸಲಿದ್ದಾರೆ. ವಿಧಾನಸೌಧಕ್ಕಾಗಲಿ ಅಥವಾ ಜಿಲ್ಲಾಧಿಕಾರಿ ಕಚೇರಿಗಳಿಗಾಗಲಿ ಅಲೆಯಲು ಸಾಧ್ಯವಾಗದ ದುರ್ಬಲ ವರ್ಗದವರಿಗೆ ಸ್ಥಳದಲ್ಲೇ ನ್ಯಾಯ ಒದಗಿಸುವುದು ಇದರ ಮುಖ್ಯ ಉದ್ದೇಶವಾಗಿದೆ. ಈಗಾಗಲೇ 50 ಸಾವಿರಕ್ಕೂ ಅಧಿಕ ಅರ್ಜಿಗಳು ಬಂದಿದ್ದು, ಕೇವಲ ಅರ್ಜಿ ಸ್ವೀಕಾರಕ್ಕೆ ಸೀಮಿತವಾಗದೆ ಸಮಸ್ಯೆ ಬಗೆಹರಿಯುವವರೆಗೂ ಸರ್ಕಾರ ಜನರ ಬೆನ್ನಿಗೆ ನಿಲ್ಲಲಿದೆ ಎಂದು ಭರವಸೆ ನೀಡಿದರು. ಅಲ್ಲದೆ, ಕಂದಾಯ ಇಲಾಖೆ ಮೂಲಕ ಹಕ್ಕುಪತ್ರ ವಿತರಣೆ ಮತ್ತು ಭೂಮಿ ಗ್ಯಾರಂಟಿ ಒದಗಿಸುವ ಕಾರ್ಯ ಮುಂದುವರಿಯಲಿದ್ದು, ಕಾನೂನು ಹೋರಾಟ ನಡೆಸಲು ಶಕ್ತಿಯಿಲ್ಲದ ಬಡ ನಾಗರಿಕರಿಗೆ ಸರ್ಕಾರದ ವತಿಯಿಂದಲೇ ಉಚಿತವಾಗಿ ವಕೀಲರನ್ನು ಒದಗಿಸಿ ನ್ಯಾಯ ಕೊಡಿಸಲಾಗುವುದು ಎಂದು ಸ್ಪಷ್ಟಪಡಿಸಿದರು.
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ 136 ಸ್ಥಾನಗಳನ್ನು ನೀಡಿ ಅಧಿಕಾರ ಕೊಟ್ಟಿರುವ ಜನರೇ ನಿಜವಾದ ಮಾಲೀಕರು ಎಂದ ಅವರು, "ನನ್ನನ್ನು ನಾಡದೊರೆ ಎಂದು ಕರೆಯಬೇಡಿ, ನಾನು ನಿಮ್ಮ ಪ್ರಜಾಸೇವಕ. ಜನರ ಯಶಸ್ಸೇ ಸರ್ಕಾರದ ನಿಜವಾದ ಮಾನದಂಡ" ಎಂದರು. ವಿರೋಧ ಪಕ್ಷಗಳ ಟೀಕೆಗಳಿಗೆ ತಿರುಗೇಟು ನೀಡುತ್ತಾ, ನೆರೆ-ಬರ ಪರಿಸ್ಥಿತಿಯನ್ನು ಹೆಲಿಕಾಪ್ಟರ್ನಲ್ಲಿ ಸಮೀಕ್ಷೆ ನಡೆಸಿದ್ದನ್ನು ಹಾಗೂ ಗ್ಯಾರಂಟಿ ಯೋಜನೆಗಳನ್ನು ಹಿಂದೆ ವಿಪಕ್ಷಗಳು ಟೀಕಿಸಿದ್ದನ್ನು ಸ್ಮರಿಸಿದ ಅವರು, "ಟೀಕೆಗಳು ಸಾಯುತ್ತವೆ, ಆದರೆ ನಾವು ಮಾಡಿದ ಜನಪರ ಅಭಿವೃದ್ಧಿ ಕೆಲಸಗಳು ಶಾಶ್ವತವಾಗಿ ಉಳಿಯುತ್ತವೆ" ಎಂದರು. ರಾಜ್ಯದ ಬರ ಪರಿಸ್ಥಿತಿಗೆ ಸ್ಪಂದಿಸುವ ನಿಟ್ಟಿನಲ್ಲಿ ಈಗಾಗಲೇ 102 ಬರಪೀಡಿತ ತಾಲೂಕುಗಳನ್ನು ಘೋಷಿಸಲಾಗಿದ್ದು, ಶೀಘ್ರದಲ್ಲೇ ಎರಡನೇ ಪಟ್ಟಿಯಲ್ಲಿ 50ಕ್ಕೂ ಹೆಚ್ಚು ತಾಲೂಕುಗಳನ್ನು ಬರಪೀಡಿತ ಎಂದು ಘೋಷಣೆ ಮಾಡಲಾಗುವುದು ಎಂದು ತಿಳಿಸಿದರು.