ಬೆಂಗಳೂರು: ರಾಜ್ಯದಲ್ಲಿ ಆರೋಗ್ಯ ಇಲಾಖೆಯು ಸರ್ಕಾರಿ ಆಸ್ಪತ್ರೆಗಳಲ್ಲಿ ಗುಣಮಟ್ಟದ ಆರೋಗ್ಯ ಸೇವೆ ಒದಗಿಸುವುದರ ಜೊತೆಗೆ ಬೆಂಗಳೂರಿನ ಖಾಸಗಿ ವಲಯದ ಆಸ್ಪತ್ರೆಗಳಲ್ಲಿ ಹೆಲ್ತ್ ಟೂರಿಸಮ್ಗೆ ಉತ್ತೇಜನ ನೀಡಲು ಮುಂದಾಗಿದ್ದು, ಬೆಂಗಳೂರಿನ ಆರೋಗ್ಯ ಸೌಧದಲ್ಲಿ ನಿನ್ನೆ ಪ್ರತಿಷ್ಠಿತ ಖಾಸಗಿ ಆಸ್ಪತ್ರೆಗಳ ಪ್ರತಿನಿಧಿಗಳ ಜೊತೆ ಸಭೆ ನಡೆಸಿದ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್, ಹೆಲ್ತ್ ಟೂರಿಸಮ್ ಬೆಳೆಸಲು ಸರ್ಕಾರದಿಂದ ಆಗಬೇಕಾಗಿರುವ ಕಾರ್ಯಗಳ ಕುರಿತು ಖಾಸಗಿ ವಲಯದ ವೈದ್ಯಕೀಯ ತಜ್ಞರೊಂದಿಗೆ ಸಮಾಲೋಚನೆ ನಡೆಸಿದರು. ಮಣಿಪಾಲ್ ಆಸ್ಪತ್ರೆ, ನಾರಾಯಣ ಹೃದಯಾಲಯ, ಅಪೋಲೋ ಹೆಲ್ತ್ ಕೇರ್ ಸೇರಿದಂತೆ 50ಕ್ಕೂ ಹೆಚ್ಚು ಪ್ರತಿಷ್ಠಿತ ಖಾಸಗಿ ಆಸ್ಪತ್ರೆಗಳ ಪ್ರತಿನಿಧಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು.
ಸರ್ಕಾರದ ವತಿಯಿಂದ ಅಧಿಕೃತ ಪೊರ್ಟಲ್ ರಚಿಸಿ, ಆ ಮೂಲಕ ಖಾಸಗಿ ಆಸ್ಪತ್ರೆಗಳ ಗುಣಮಟ್ಟದ ಚಿಕಿತ್ಸೆಗಳ ಕುರಿತು ಸರ್ಕಾರವೇ ಕ್ರೆಡಿಟ್ ಪಾಯಿಂಟ್ಸ್ ನೀಡಬಹುದು ಎಂದು ಸಭೆಯಲ್ಲಿ ಹಲವು ಖಾಸಗಿ ವಲಯದ ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದರು. ಅಲ್ಲದೇ ಪ್ರತಿ ಚಿಕಿತ್ಸೆಗೆ ದರ ಎಷ್ಟು ಹಾಗೂ ಗುಣಮಟ್ಟದ ಬಗ್ಗೆ ಸರ್ಕಾರವೇ ಸರ್ಟಿಫೈ ಮಾಡಲಿ ಎಂಬ ಅಭಿಪ್ರಾಯಗಳೂ ವ್ಯಕ್ತವಾದವು.
ಕೆಲವು ಗುಣಮಟ್ಟದ ಚಿಕಿತ್ಸೆಗಳನ್ನು ಪಡೆಯಲು ಮಾತ್ರ ಜನರು ದೊಡ್ಡ ದೊಡ್ಡ ಆಸ್ಪತ್ರೆಗಳಿಗೆ ಬರುತ್ತಾರೆ. ಬೆಂಗಳೂರಿನಲ್ಲಿ ಉತ್ತಮ ಆಸ್ಪತ್ರೆಗಳಿವೆ. ಇಂದು ವಿದೇಶಗಳಲ್ಲಿ ತಜ್ಞ ವೈದ್ಯರ ಸಮಯಕ್ಕಾಗಿ ತಿಂಗಳುಗಟ್ಟಲೆ ಕಾಯುವ ಪರಿಸ್ಥಿತಿ ಇದೆ. ಇಂತಹ ಸಂದರ್ಭದಲ್ಲಿ ಬೆಂಗಳೂರಿನಲ್ಲಿ ಹೆಲ್ತ್ ಟೂರಿಸಮ್ ಮೂಲಕ ವಿದೇಶಿಗರನ್ನು ಹೆಚ್ಚು ಆಕರ್ಷಿಸಬಹುದು. ಅಲ್ಲದೇ ಆರೋಗ್ಯ ಸೇವೆಗಳಿಗೆ ಬೆಂಗಳೂರಿಗೆ ಬರುವ ಜನರು ರಾಜ್ಯದ ಇತರ ಪ್ರವಾಸ ಸ್ಥಳಗಳಿಗೂ ಭೇಟಿ ನೀಡುತ್ತಾರೆ. ಇದರಿಂದ ರಾಜ್ಯದ ಪ್ರವಾಸೋದ್ಯಮ ಅಭಿವೃದ್ಧಿಗೂ ಸಹಕಾರಿಯಾಗಲಿದೆ ಎಂದರು.