ಬೆಂಗಳೂರು : ಬೆಂಗಳೂರಿನ ಹೆಬ್ಬಾಳದಿಂದ ರೇಷ್ಮೆ ಮಂಡಳಿ (ಸಿಲ್ಕ್ ಬೋರ್ಡ್) ವರೆಗೆ ನಿರ್ಮಿಸಲು ಉದ್ದೇಶಿಸಿರುವ ಸುರಂಗ ರಸ್ತೆ ಯೋಜನೆಯಿಂದ ಲಾಲ್‌ಬಾಗ್ ಹಾಗೂ ಹೆಬ್ಬಾಳ ಕೆರೆಗೆ ತೊಂದರೆಯಾಗುವ ಆತಂಕ ವ್ಯಕ್ತವಾಗಿರುವ ಹಿನ್ನೆಲೆಯಲ್ಲಿ, ಕರ್ನಾಟಕ ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ಮಹತ್ವದ ನಿರ್ದೇಶನ ನೀಡಿದೆ. ಲಾಲ್‌ಬಾಗ್‌ನಲ್ಲಿರುವ ಅತ್ಯಂತ ಪುರಾತನ ಶಿಲಾರಚನೆಗೆ ಉಂಟಾಗಬಹುದಾದ ಹಾನಿಯ ಕುರಿತು ಭಾರತೀಯ ಭೂ ವೈಜ್ಞಾನಿಕ ಸಮೀಕ್ಷೆ (ಜಿಎಸ್‌ಐ) ಸಂಸ್ಥೆ ಸಿದ್ಧಪಡಿಸಿರುವ ವರದಿಯನ್ನು ಸಲ್ಲಿಸುವಂತೆ ಸೂಚಿಸಿದೆ.
ನಗರದ ಬಹುನಿರೀಕ್ಷಿತ ಹಾಗೂ ವಿವಾದಿತ ಸುರಂಗ ಮಾರ್ಗ ಯೋಜನೆಗೆ ತಡೆ ನೀಡಬೇಕೆಂದು ಕೋರಿ ರಂಗಕರ್ಮಿ ಹಾಗೂ ನಟ, ನಿರ್ದೇಶಕ ಪ್ರಕಾಶ್ ಬೆಳವಾಡಿ ಮತ್ತಿತರರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ವಿಭು ಬಕ್ರು ಮತ್ತು ನ್ಯಾಯಮೂರ್ತಿ ಕೆ.ಎಸ್.ಹೇಮಲೇಖಾ ಅವರಿದ್ದ ವಿಭಾಗೀಯ ಪೀಠ ಈ ಆದೇಶ ಹೊರಡಿಸಿದೆ. ವಿಚಾರಣೆ ವೇಳೆ ಅರ್ಜಿದಾರರ ವಕೀಲರು ಜಿಎಸ್‌ಐ ವರದಿ ಸಲ್ಲಿಸಲು ಕೋರಿದ ಮನವಿಯನ್ನು ಪುರಸ್ಕರಿಸಿದ ಪೀಠವು, ವರದಿ ಸಲ್ಲಿಸಲು ಸಕ್ಷಮ ಪ್ರಾಧಿಕಾರಕ್ಕೆ ನಿರ್ದೇಶಿಸಿತು.
ಇದೇ ಯೋಜನೆಯ ಕುರಿತಾದ ಇತರ ಅರ್ಜಿಗಳ ವಿಚಾರಣೆ ನಡೆಸಿದ ಪೀಠ, ಹೆಬ್ಬಾಳ ಕೆರೆ ಭಾಗದಲ್ಲಿ ಹಾದುಹೋಗುವ ಕಿರು ಸುರಂಗ ಮಾರ್ಗದಿಂದ ಕೆರೆಯ ಒಳಹರಿವು, ಹೊರಹರಿವು ಹಾಗೂ ಅಂತರ್ಜಲದ ಹರಿವಿಗೆ ಧಕ್ಕೆಯಾಗಲಿದೆಯೇ ಎಂಬುದರ ಕುರಿತು ಎಂಜಿನಿಯರ್‌ಗಳಿಂದ ತಾಂತ್ರಿಕ ವಿವರಣೆ ನೀಡುವಂತೆ ಸರ್ಕಾರಕ್ಕೆ ಆದೇಶಿಸಿದೆ. ಕೆರೆಯ ತಳಭಾಗದಲ್ಲಿ ಸುರಂಗ ಮಾರ್ಗ ನಿರ್ಮಾಣವಾಗುವುದರಿಂದ ರಾಜಕಾಲುವೆ ಜಾಲಕ್ಕೆ ಅಡ್ಡಿಯಾಗಬಹುದು ಎಂಬ ಅರ್ಜಿದಾರರ ಆತಂಕಗಳನ್ನು ನಿವಾರಿಸುವ ನಿಟ್ಟಿನಲ್ಲಿ ಈ ತಾಂತ್ರಿಕ ಸ್ಪಷ್ಟನೆ ಅಗತ್ಯ ಎಂದು ಹೈಕೋರ್ಟ್ ತಿಳಿಸಿದೆ.