ಬೆಂಗಳೂರು : ರಾಜಧಾನಿ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಧರಣಿ ನಡೆಸುವುದು ಈಗ ಭಾರೀ ದುಬಾರಿಯಾಗಿದ್ದು, ಸಾರ್ವಜನಿಕರು ಹಾಗೂ ಹೋರಾಟಗಾರರ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಪಾರ್ಕ್ ಆವರಣದ ಪಾರ್ಕಿಂಗ್ ಸಮುಚ್ಛಯದ ಮೇಲ್ಭಾಗದಲ್ಲಿ ಸಮಾವೇಶ ನಡೆಸಲು 'ಗ್ರೇಟರ್ ಬೆಂಗಳೂರು ಪ್ರಾಧಿಕಾರ' (GBA) ದಿನಕ್ಕೆ ಬರೋಬ್ಬರಿ ₹1 ಲಕ್ಷ ಬಾಡಿಗೆ ನಿಗದಿಪಡಿಸಿದೆ. ಇದರಿಂದಾಗಿ ಹಣ ತೆರಲು ಸಾಮರ್ಥ್ಯವಿರುವ ಪ್ರಭಾವಿ ಸಂಸ್ಥೆಗಳಿಗೆ ಮಾತ್ರ ಸುಸಜ್ಜಿತ ಜಾಗ ಲಭ್ಯವಾಗುತ್ತಿದ್ದು, ರಾಜ್ಯದ ನಾನಾ ಭಾಗಗಳಿಂದ ತಮ್ಮ ಹಕ್ಕುಗಳಿಗಾಗಿ ಬರುವ ಬಡ ಪ್ರತಿಭಟನಾಕಾರರು ಕಿರಿದಾದ ಬಯಲು ಜಾಗದಲ್ಲೇ ಮಳೆ ಮತ್ತು ಸುಡುವ ಬಿಸಿಲಿನಲ್ಲಿ ನಿಂತು ಹೋರಾಟ ನಡೆಸುವ ಪರಿಸ್ಥಿತಿ ನಿರ್ಮಾಣವಾಗಿದೆ.
2018ರಲ್ಲಿ ಸಾರ್ವಜನಿಕ ಹಾಗೂ ಪ್ರತಿಭಟನಾಕಾರರ ಹಿತದೃಷ್ಟಿಯಿಂದ ಕೋಟಿಗಟ್ಟಲೆ ವೆಚ್ಚದಲ್ಲಿ ನಿರ್ಮಿಸಲಾಗಿದ್ದ ಈ ಬೃಹತ್ ಕಟ್ಟಡವನ್ನು ಇದೀಗ ಜಿಬಿಎ ವಾಣಿಜ್ಯೀಕರಣಗೊಳಿಸಿದೆ ಎಂಬ ಆರೋಪ ವ್ಯಕ್ತವಾಗಿದೆ. ಮೂಲಸೌಕರ್ಯಗಳ ಕೊರತೆಯಿಂದಾಗಿ ಪ್ರತಿಭಟನೆಯಲ್ಲಿ ಪಾಲ್ಗೊಳ್ಳುವ ರೈತರು, ಕಾರ್ಮಿಕರು ಹಾಗೂ ಮಹಿಳೆಯರಿಗೆ ಸೂಕ್ತ ಶೌಚಾಲಯ ಮತ್ತು ಕುಡಿಯುವ ನೀರಿನ ಸೌಲಭ್ಯವೂ ಸಿಗದೆ ಯಾತನೆ ಅನುಭವಿಸುವಂತಾಗಿದೆ.
ಈ ನಿರ್ಧಾರವನ್ನು ತೀವ್ರವಾಗಿ ಖಂಡಿಸಿರುವ ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ, ಸರ್ಕಾರ ಮತ್ತು ಆಡಳಿತ ವ್ಯವಸ್ಥೆಯು ಫ್ರೀಡಂ ಪಾರ್ಕ್ ಅನ್ನು ವ್ಯಾಪಾರಿ ಕೇಂದ್ರವನ್ನಾಗಿ ಪರಿವರ್ತಿಸಿದೆ ಎಂದು ವಾಗ್ದಾಳಿ ನಡೆಸಿದ್ದಾರೆ. ಬಡವರು ನ್ಯಾಯ ಕೇಳಲು ಬಂದಾಗ ಲಕ್ಷಾಂತರ ರೂಪಾಯಿ ವಸೂಲಿ ಮಾಡುವುದು ಅನ್ಯಾಯವಾಗಿದ್ದು, ಕೂಡಲೇ ಈ ಶುಲ್ಕವನ್ನು ಹಿಂಪಡೆದು ಪ್ರತಿಭಟನಾಕಾರರಿಗೆ ಉಚಿತವಾಗಿ ಜಾಗ ಬಿಟ್ಟುಕೊಡಬೇಕೆಂದು ಅವರು ಆಗ್ರಹಿಸಿದ್ದಾರೆ.