ಬೆಂಗಳೂರು : ಆರ್‌ಎಸ್‌ಎಸ್ ಪಥಸಂಚಲನದಲ್ಲಿ ಭಾಗವಹಿಸಿದ ಆರೋಪದ ಮೇಲೆ ಅಮಾನತುಗೊಂಡಿದ್ದ ಯಾದಗಿರಿ ಜಿಲ್ಲೆಯ ಇಬ್ಬರು ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ಅಮಾನತು ಆದೇಶಕ್ಕೆ ಕರ್ನಾಟಕ ರಾಜ್ಯ ಆಡಳಿತ ನ್ಯಾಯಮಂಡಳಿಯ (ಕೆಎಟಿ) ಕಲಬುರಗಿ ಪೀಠವು ತಡೆಯಾಜ್ಞೆ ನೀಡಿದೆ. ಇದರಿಂದಾಗಿ ಕ್ರಮ ಎದುರಿಸುತ್ತಿದ್ದ ಶಿಕ್ಷಕರಾದ ಗುರುರಾಜ ಜೋಶಿ ಹಾಗೂ ಅಣ್ಣಾಸಾಹೇಬ ದೇಶಮುಖ ಅವರಿಗೆ ದೊಡ್ಡ ಮಟ್ಟದ ರಿಲೀಫ್ ಸಿಕ್ಕಂತಾಗಿದೆ.
2025ರ ಅಕ್ಟೋಬರ್‌ನಲ್ಲಿ ನಡೆದಿದ್ದ ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್) ಪಥಸಂಚಲನದಲ್ಲಿ ಗಣವೇಷ ಧರಿಸಿ ಭಾಗವಹಿಸಿದ್ದರು ಎಂಬ ಆರೋಪದಡಿ, ಯಾದಗಿರಿ ಜಿಲ್ಲೆಯ ಹುಣಸಗಿ ತಾಲೂಕಿನ ಈ ಇಬ್ಬರು ಶಿಕ್ಷಕರನ್ನು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಡಿಡಿಪಿಐ ಚನ್ನಬಸ್ಸಪ್ಪ ಮಧೋಳ ಅವರು ಆಗಸ್ಟ್ 20ರಂದು ಅಮಾನತುಗೊಳಿಸಿ ಆದೇಶ ಹೊರಡಿಸಿದ್ದರು. ಸರ್ಕಾರಿ ನೌಕರರಾಗಿ ಇಂತಹ ಚಟುವಟಿಕೆಗಳಲ್ಲಿ ಭಾಗವಹಿಸುವುದು ಕರ್ನಾಟಕ ನಾಗರಿಕ ಸೇವಾ ನಡತೆ ನಿಯಮಗಳ ಉಲ್ಲಂಘನೆ ಎಂದು ಇಲಾಖೆಯು ನೋಟಿಸ್ ನೀಡಿ ಅಮಾನತು ಮಾಡಿತ್ತು.
ಇಲಾಖೆಯ ಈ ಕ್ರಮವನ್ನು ಪ್ರಶ್ನಿಸಿ ಶಿಕ್ಷಕರಿಬ್ಬರೂ ಕೆಎಟಿ ಕಲಬುರಗಿ ವಿಭಾಗದಲ್ಲಿ ಅರ್ಜಿ ಸಲ್ಲಿಸಿದ್ದರು. ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮಂಡಳಿಯು ಇಲಾಖೆ ಹೊರಡಿಸಿದ್ದ ಅಮಾನತು ಆದೇಶಕ್ಕೆ ಮಧ್ಯಂತರ ತಡೆಯಾಜ್ಞೆ ನೀಡಿದೆ. ಪಥಸಂಚಲನವು ಕೆಲಸದ ಅವಧಿಯ ಹೊರತಾಗಿ ರಜಾದಿನದಲ್ಲಿ ನಡೆದ ಸಾಂಸ್ಕೃತಿಕ ಕಾರ್ಯಕ್ರಮವಾಗಿದ್ದು, ಇದರಲ್ಲಿ ಭಾಗವಹಿಸಿರುವುದು ಕರ್ತವ್ಯ ಲೋಪವಲ್ಲ ಎಂಬ ಶಿಕ್ಷಕರ ವಾದದ ಹಿನ್ನೆಲೆಯಲ್ಲಿ ಕೆಎಟಿ ಈ ಆದೇಶ ನೀಡಿದೆ.