ಚಿಕ್ಕಬಳ್ಳಾಪುರ : ಚಿಕ್ಕಬಳ್ಳಾಪುರ ತಾಲೂಕಿನ ಸರ್ಕಾರಿ ಹಾಗೂ ಅನುದಾನಿತ ಶಾಲೆಗಳಲ್ಲಿ 7ನೇ ತರಗತಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಕನಿಷ್ಠ ಓದು-ಬರಹ ಹಾಗೂ ಅಕ್ಷರಜ್ಞಾನ ಇಲ್ಲದಿದ್ದರೆ, ಅಂತಹ ಮಕ್ಕಳಿಗೆ 1 ರಿಂದ 6ನೇ ತರಗತಿಯವರೆಗೆ ಪಾಠ ಮಾಡಿದ ಶಿಕ್ಷಕರಿಗೆ ನೋಟಿಸ್ ಜಾರಿ ಮಾಡಿ, ಅಮಾನತಿಗೆ ಶಿಫಾರಸು ಮಾಡುವಂತೆ ಶಾಸಕ ಪ್ರದೀಪ್ ಈಶ್ವರ್ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ (BEO) ಅಧಿಕೃತ ಪತ್ರದ ಮೂಲಕ ಖಡಕ್ ಸೂಚನೆ ನೀಡಿದ್ದಾರೆ.
ತಾಲ್ಲೂಕಿನ ಶೈಕ್ಷಣಿಕ ಪ್ರಗತಿಯನ್ನು ಗಂಭೀರವಾಗಿ ಪರಿಗಣಿಸಿರುವ ಶಾಸಕರು, ಮೂಲಭೂತ ಓದು-ಬರಹ ಬಾರದ 7ನೇ ತರಗತಿಯ ಮಕ್ಕಳನ್ನು ತಕ್ಷಣವೇ ಗುರುತಿಸಲು ತಿಳಿಸಿದ್ದಾರೆ. ಮಗು 7ನೇ ತರಗತಿಗೆ ಬಂದರೂ ಅಕ್ಷರಜ್ಞಾನ ಕಲಿಯದಿರಲು ಕಾರಣರಾದ, 1 ರಿಂದ 6ನೇ ತರಗತಿಯವರೆಗೆ ಬೋಧನೆ ಮಾಡಿದ ಎಲ್ಲಾ ಶಿಕ್ಷಕರಿಗೂ ನಿಯಮಾನುಸಾರ ಕಾರಣ ಕೇಳಿ ನೋಟಿಸ್ ನೀಡಲು ಪತ್ರದಲ್ಲಿ ಆದೇಶಿಸಲಾಗಿದೆ.
ಸರ್ಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ಕಲಿಕಾ ಸಾಮರ್ಥ್ಯ ಕುಸಿಯುತ್ತಿರುವ ಕುರಿತು ಸಾರ್ವಜನಿಕರಿಂದ ದೂರುಗಳು ಕೇಳಿಬರುತ್ತಿದ್ದ ಹಿನ್ನೆಲೆಯಲ್ಲಿ, ಬೋಧಕರಲ್ಲಿ ಶಿಸ್ತು ಮತ್ತು ಬದ್ಧತೆ ಮೂಡಿಸಲು ಈ ಕಠಿಣ ಕ್ರಮ ಕೈಗೊಳ್ಳಲಾಗಿದೆ. ಶಾಸಕರ ಈ ನಿರ್ಧಾರವು ಚಿಕ್ಕಬಳ್ಳಾಪುರ ಶೈಕ್ಷಣಿಕ ವಲಯದಲ್ಲಿ ಭಾರೀ ಸಂಚಲನ ಮೂಡಿಸಿದ್ದು, ಪೋಷಕರು ಹಾಗೂ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ.