ಬೆಂಗಳೂರು : ರಸ್ತೆಯಲ್ಲಿ ನಮಾಜ್ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಸೌಹಾರ್ದತೆ ಕದಡುವ ಹಾಗೂ ಅಶಾಂತಿ ಮೂಡಿಸುವಂತಹ ಪೋಸ್ಟ್‌ಗಳನ್ನು ಹಂಚಿಕೊಳ್ಳುವುದರಿಂದ ಯಾವುದೇ ಪ್ರಗತಿ ಸಾಧ್ಯವಿಲ್ಲ ಎಂದು ಕರ್ನಾಟಕ ಹೈಕೋರ್ಟ್ ತೀವ್ರ ಬೇಸರ ವ್ಯಕ್ತಪಡಿಸಿದೆ. ವಿಭಿನ್ನ ಸಮುದಾಯಗಳ ನಡುವೆ ದ್ವೇಷ ಉತ್ತೇಜಿಸಿದ ಆರೋಪದ ಮೇಲೆ ಮಂಗಳೂರು ನಗರದ ಸಿಇಎನ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಎಫ್‌ಐಆರ್ ರದ್ದುಗೊಳಿಸುವಂತೆ ಕೋರಿ ಹಿಂದೂ ಸಂಘಟನೆಯ ಮುಖಂಡ ಶರಣ್ ಪಂಪ್‌ವೆಲ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠವು ಈ ಮೌಖಿಕ ಅಭಿಪ್ರಾಯ ವ್ಯಕ್ತಪಡಿಸಿ, ತೀರ್ಪನ್ನು ಕಾಯ್ದಿರಿಸಿದೆ.
ರಸ್ತೆಯಲ್ಲಿ ನಮಾಜ್ ಮಾಡಿದ ಪ್ರಕರಣದಲ್ಲಿ ಪೊಲೀಸರು ಕೇವಲ 24 ಗಂಟೆಗಳಲ್ಲಿ 'ಬಿ' ರಿಪೋರ್ಟ್ ಸಲ್ಲಿಸಿದ್ದರೆಂದು ಆರೋಪಿಸಿ ಶರಣ್ ಪಂಪ್‌ವೆಲ್ ಫೇಸ್‌ಬುಕ್‌ನಲ್ಲಿ ಪೋಸ್ಟ್ ಹಾಕಿದ್ದರು. ವಿಚಾರಣೆ ವೇಳೆ ಅರ್ಜಿದಾರರ ಪರ ಹಿರಿಯ ವಕೀಲ ಅರುಣ್ ಶ್ಯಾಮ್ ವಾದ ಮಂಡಿಸಿ, ಪೊಲೀಸರು ತಡಮಾಡದೇ 'ಬಿ' ರಿಪೋರ್ಟ್ ನೀಡಿದ್ದನ್ನು ಪ್ರಶ್ನಿಸಿ ಕಾಮೆಂಟ್ ಮಾಡಿದ್ದಕ್ಕೆ ಪೊಲೀಸರೇ ಸ್ವಯಂಪ್ರೇರಿತರಾಗಿ ದೂರು ದಾಖಲಿಸಿದ್ದಾರೆ. ಆದರೆ ದೂರಿನಲ್ಲಿ ಉಲ್ಲೇಖಿಸಲಾಗಿರುವ ಅಪರಾಧದ ಅಂಶಗಳು ಅರ್ಜಿದಾರರಿಗೆ ಅನ್ವಯಿಸುವುದಿಲ್ಲ ಎಂದು ನ್ಯಾಯಪೀಠದ ಗಮನಕ್ಕೆ ತಂದರು.
ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಸರ್ಕಾರಿ ಅಭಿಯೋಜಕ ಬಿ.ಎನ್. ಜಗದೀಶ್, ಅರ್ಜಿದಾರರು ಸಾಮಾಜಿಕ ಅಶಾಂತಿ ಮೂಡಿಸುವ ರೀತಿಯಲ್ಲಿ ಪೋಸ್ಟ್ ಹಂಚಿಕೊಂಡಿದ್ದು, ಇದರಿಂದ ಕೋಮು ಸೌಹಾರ್ದತೆ ಹಾಗೂ ಶಾಂತಿ ಸುವ್ಯವಸ್ಥೆಗೆ ಧಕ್ಕೆಯಾಗುತ್ತದೆ. ಇನ್ನೊಬ್ಬರು ಮತ್ತೊಂದು ಸಮುದಾಯದ ಆಚರಣೆಗಳ ಬಗ್ಗೆ ಈ ರೀತಿ ಕಾಮೆಂಟ್ ಮಾಡಲು ಶುರುಮಾಡಿದರೆ ಸಮಾಜಕ್ಕೆ ಹೋಗುವ ಸಂದೇಶ ಮತ್ತು ಕಾನೂನು ಸುವ್ಯವಸ್ಥೆಯ ಗತಿಯೇನು ಎಂದು ಪ್ರಶ್ನಿಸಿದರು.
ಇಬ್ಬರ ವಾದ ಆಲಿಸಿದ ನ್ಯಾಯಮೂರ್ತಿಗಳು, ಪ್ರತಿಯೊಬ್ಬ ಮನುಷ್ಯನೂ ಸೌಹಾರ್ದತೆಯಿಂದ ಬದುಕುವುದೇ ಅತ್ಯುತ್ತಮ ಮಾರ್ಗ. ಹೀಗಿರುವಾಗ ಸೌಹಾರ್ದತೆಯನ್ನು ಕದಡುವುದು ಮತ್ತು ಪರಸ್ಪರ ಟೀಕೆಗಳನ್ನು ಮಾಡಿಕೊಳ್ಳುವುದರಿಂದ ಯಾವ ಪ್ರಗತಿ ಸಾಧ್ಯ ಎಂದು ಬೇಸರ ವ್ಯಕ್ತಪಡಿಸಿದರು. ಪ್ರಕರಣದ ವಾದ-ಪ್ರತಿವಾದ ಆಲಿಸಿದ ನ್ಯಾಯಪೀಠವು ತೀರ್ಪನ್ನು ಕಾಯ್ದಿರಿಸಿದ್ದು, ಆದೇಶ ಹೊರಬೀಳುವವರೆಗೆ ಅರ್ಜಿದಾರರ ವಿರುದ್ಧದ ತನಿಖೆಗೆ ನೀಡಲಾಗಿದ್ದ ತಡೆಯಾಜ್ಞೆಯನ್ನು ಮುಂದುವರಿಸಿದೆ.