image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ರಾಜ್ಯ

2027ರ ಮಾರ್ಚ್‌ ವೇಳೆಗೆ ನೂತನ ಡಿಸಿ ಕಚೇರಿ ಸಂಕೀರ್ಣ ಲೋಕಾರ್ಪಣೆ: ಡಾ. ಸಿ.ಟಿ. ರವಿ

2027ರ ಮಾರ್ಚ್‌ ವೇಳೆಗೆ ನೂತನ ಡಿಸಿ ಕಚೇರಿ ಸಂಕೀರ್ಣ ಲೋಕಾರ್ಪಣೆ: ಡಾ. ಸಿ.ಟಿ. ರವಿ

ಚಿಕ್ಕಮಗಳೂರು : ಚಿಕ್ಕಮಗಳೂರು ಜಿಲ್ಲೆಯ ಸಮಗ್ರ ಅಭಿವೃದ್ಧಿಯ ನೀಲನಕ್ಷೆಯ ಪ್ರಮುಖ ಭಾಗವಾಗಿ ನಿರ್ಮಾಣಗೊಳ್ಳುತ್ತಿರುವ ನೂತನ ಜಿಲ್ಲಾಧಿಕಾರಿ (ಡಿಸಿ) ಕಚೇರಿ ಸಂಕೀರ್ಣದ ಕಾಮಗಾರಿಗಳು ಪ್ರಸ್ತುತ ಮುಕ್ತಾಯದ ಹಂತ ತಲುಪಿದ್ದು, 2027ರ ಮಾರ್ಚ್ ಅಥವಾ ಏಪ್ರಿಲ್ ವೇಳೆಗೆ ಸಾರ್ವಜನಿಕರ ಸೇವೆಗೆ ಮುಕ್ತವಾಗಲಿದೆ ಎಂದು ವಿಧಾನ ಪರಿಷತ್ ಸದಸ್ಯ ಡಾ. ಸಿ.ಟಿ. ರವಿ ತಿಳಿಸಿದ್ದಾರೆ. ನೂತನ ಸಂಕೀರ್ಣಕ್ಕೆ ಭೇಟಿ ನೀಡಿ ಕಾಮಗಾರಿಯ ಪ್ರಗತಿಯನ್ನು ಪರಿಶೀಲಿಸಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಈ ಬೃಹತ್ ಯೋಜನೆಗಾಗಿ ಒಟ್ಟು 60 ಕೋಟಿ ರೂಪಾಯಿ ಅನುದಾನದ ಪೈಕಿ ಮೊದಲ ಹಂತದಲ್ಲಿ 30 ಕೋಟಿ ರೂಪಾಯಿ ಮಂಜೂರು ಮಾಡಿಸಲಾಗಿತ್ತು. ಪ್ರಸ್ತುತ 56 ಕೋಟಿ ರೂಪಾಯಿ ವೆಚ್ಚದಲ್ಲಿ ಆಡಿಟೋರಿಯಂ, ಕಚೇರಿ ಸಂಕೀರ್ಣ ಹಾಗೂ ಲ್ಯಾಂಡ್‌ಸ್ಕೇಪಿಂಗ್ ಕಾಮಗಾರಿಗಳನ್ನು ಒಳಗೊಂಡ ಸುಸಜ್ಜಿತ ಯೋಜನೆ ಅನುಷ್ಠಾನಗೊಳ್ಳುತ್ತಿದ್ದು, ಒಂದೇ ಸೂರಿನಡಿ ಜಿಲ್ಲಾ ಮಟ್ಟದ ಏಳು ಪ್ರಮುಖ ಇಲಾಖೆಗಳು ಕಾರ್ಯನಿರ್ವಹಿಸಲಿವೆ ಎಂದರು.

ಈ ಯೋಜನೆಯ ಹಿನ್ನೆಲೆಯನ್ನು ವಿವರಿಸಿದ ಅವರು, ಈ ಹಿಂದೆ ತಾಜ್ ಹೋಟೆಲ್ ಸಮೀಪ ಸಂಕೀರ್ಣ ನಿರ್ಮಾಣಕ್ಕೆ ಕ್ರಮ ಕೈಗೊಂಡು ಸುಮಾರು 3 ಕೋಟಿ ರೂಪಾಯಿ ವೆಚ್ಚ ಮಾಡಲಾಗಿತ್ತು. ಆದರೆ ಸ್ಥಳದ ವಿವಾದ ಹಾಗೂ ಸಾರ್ವಜನಿಕರಿಗೆ ದೂರವಾಗುತ್ತದೆ ಎಂಬ ಆಕ್ಷೇಪ ವ್ಯಕ್ತವಾದ ಹಿನ್ನೆಲೆಯಲ್ಲಿ, ತೋಟಗಾರಿಕಾ ಇಲಾಖೆಗೆ ಸೇರಿದ ಪ್ರಸ್ತುತ ಜಾಗವನ್ನು ಗುರುತಿಸಲಾಯಿತು. ಅಂದಿನ ಕಂದಾಯ ಸಚಿವ ಆರ್. ಅಶೋಕ್ ಅವರ ನೇತೃತ್ವದಲ್ಲಿ ಶಂಕುಸ್ಥಾಪನೆ ನೆರವೇರಿಸಿ ಕಾಮಗಾರಿಗೆ ಚಾಲನೆ ನೀಡಲಾಗಿತ್ತು. ಡಿಸಿ ಕಾಂಪ್ಲೆಕ್ಸ್ ಅನ್ನು ನಮ್ಮ ಕನಸಿನ ಕೂಸು ಎಂದು ಬಣ್ಣಿಸಿದ ರವಿ, ಕಟ್ಟಡದ ದೀರ್ಘಕಾಲೀನ ಬಾಳಿಕೆ, ಸಾರ್ವಜನಿಕ ಬಳಕೆ ಹಾಗೂ ಸೂಕ್ತ ನಿರ್ವಹಣೆಯ ಅಂಶಗಳಿಗೆ ಹೆಚ್ಚಿನ ಗಮನ ಹರಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಹಿಂದೆ ಎಲ್ಲೆಡೆ ಗ್ರಾನೈಟ್ ಬಳಸಲು ಚರ್ಚಿಸಲಾಗಿತ್ತಾದರೂ, ಪ್ರಸ್ತುತ ಪ್ಯಾಸೇಜ್‌ಗೆ ಮಾತ್ರ ಗ್ರಾನೈಟ್ ಹಾಗೂ ಉಳಿದೆಡೆ ವೆಟ್ರಿಫೈಡ್ ಟೈಲ್ಸ್ ಬಳಸಲಾಗಿದೆ. ಈ ಹಂತದಲ್ಲಿ ಅದನ್ನು ಪ್ರಶ್ನಿಸುವುದಕ್ಕಿಂತ ಕಟ್ಟಡವು ಚೆನ್ನಾಗಿ ಮೂಡಿಬರುವುದಷ್ಟೇ ಮುಖ್ಯ ಎಂದರು.

ಜಿಲ್ಲೆಯ ವಿವಿಧ ಭಾಗಗಳಿಂದ ಆಗಮಿಸುವ ಸಾರ್ವಜನಿಕರ ಅನುಕೂಲಕ್ಕಾಗಿ ಸಂಕೀರ್ಣದಲ್ಲಿ ಕ್ಯಾಂಟೀನ್, ಶೌಚಾಲಯ, ಪ್ರಿಂಟಿಂಗ್ ಹಾಗೂ ಜೆರಾಕ್ಸ್‌ನಂತಹ ಅಗತ್ಯ ಮೂಲಸೌಕರ್ಯಗಳನ್ನು ಒದಗಿಸುವುದು ಕಡ್ಡಾಯವಾಗಿದೆ. ಈ ಕುರಿತು ಜಿಲ್ಲಾ ಉಸ್ತುವಾರಿ ಸಚಿವರು, ಉಸ್ತುವಾರಿ ಕಾರ್ಯದರ್ಶಿಗಳು ಹಾಗೂ ಜಿಲ್ಲಾಧಿಕಾರಿಗಳೊಂದಿಗೆ ಚರ್ಚಿಸಲಾಗುವುದು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸರ್ಕಾರದ ವಿರುದ್ಧ ಪ್ರತಿಭಟಿಸಲು, ತಮ್ಮ ಹಕ್ಕುಗಳಿಗಾಗಿ ಹೋರಾಡಲು ಹಾಗೂ ಅಭಿಪ್ರಾಯಗಳನ್ನು ವ್ಯಕ್ತಪಡಿಸಲು ಆಗಮಿಸುವವರಿಗೂ ಕಚೇರಿಯ ಸಮೀಪದಲ್ಲೇ ಸೂಕ್ತ ಸ್ಥಳ ಗುರುತಿಸಿ ವೇದಿಕೆ ನಿರ್ಮಿಸಿಕೊಡುವ ಅಗತ್ಯವಿದೆ ಎಂದು ರವಿ ಅಭಿಪ್ರಾಯಪಟ್ಟರು. ಇದಲ್ಲದೆ ಸಂಚಾರ ದಟ್ಟಣೆ ಹಾಗೂ ಅಪಘಾತ ತಡೆಯಲು, ಜಿಲ್ಲಾ ಪಂಚಾಯಿತಿ ಕಚೇರಿಯಿಂದ ಎಐಟಿ ಸರ್ಕಲ್‌ವರೆಗೆ ನಿರ್ಮಿಸಲಾಗಿರುವ ಸರ್ವಿಸ್ ರಸ್ತೆಯನ್ನು ಹನುಮಂತಪ್ಪ ವೃತ್ತ ಅಥವಾ ಕತ್ರಿಮಾರಮ್ಮ ದೇವಸ್ಥಾನದವರೆಗೆ ವಿಸ್ತರಿಸಲು ಒತ್ತಾಯಿಸಿದರು.

ಇದೇ ಸಂದರ್ಭದಲ್ಲಿ ನೂತನ ಸಂಕೀರ್ಣಕ್ಕೆ ಕಚೇರಿಗಳು ಸ್ಥಳಾಂತರಗೊಂಡ ನಂತರ, ನೂರಾರು ವರ್ಷಗಳ ಹಳೆಯ ಹಾಗೂ ಮಹಾತ್ಮ ಗಾಂಧೀಜಿಯವರು ಭೇಟಿ ನೀಡಿದ್ದ ಪ್ರಸ್ತುತ ಹಳೆಯ ಡಿಸಿ ಕಚೇರಿ ಕಟ್ಟಡವನ್ನು ನಿರ್ಲಕ್ಷಿಸದೆ, ಜಿಲ್ಲೆಯ ಸಮಗ್ರ ಚಿತ್ರಣವನ್ನು ಕಟ್ಟಿಕೊಡುವ ‘ಜಿಲ್ಲಾ ಮ್ಯೂಸಿಯಂ’ ಆಗಿ ಪರಿವರ್ತಿಸಬೇಕು ಮತ್ತು ದಾಖಲೆಗಳನ್ನು ಡಿಜಿಟಲ್ ರೂಪದಲ್ಲಿ ಸಂಗ್ರಹಿಸಬೇಕು ಎಂದು ಆಗ್ರಹಿಸಿದರು. ಅಷ್ಟೇ ಅಲ್ಲದೆ, ಪ್ರವಾಸೋದ್ಯಮ ಇಲಾಖೆಯ ಅನುದಾನದಲ್ಲಿ ಆರಂಭಗೊಂಡು ತನಿಖೆಯ ನೆಪದಲ್ಲಿ ಸ್ಥಗಿತಗೊಂಡಿದ್ದ 36 ಕೋಟಿ ರೂಪಾಯಿ ವೆಚ್ಚದ ಬಸವನಹಳ್ಳಿ-ದಂಟರಮಕ್ಕಿ ಕೆರೆ ಅಭಿವೃದ್ಧಿ ಯೋಜನೆಯನ್ನು ತಕ್ಷಣವೇ ಪುನರಾರಂಭಿಸಬೇಕು ಎಂದು ಒತ್ತಾಯಿಸಿದರು. ಸರ್ಕಾರದ ಸಮಿತಿಯೇ ಯಾವುದೇ ದುರುಪಯೋಗವಾಗಿಲ್ಲ ಎಂದು ಸ್ಪಷ್ಟ ವರದಿ ನೀಡಿರುವುದರಿಂದ ಅನುದಾನ ಬಿಡುಗಡೆಗೊಳಿಸಬೇಕು ಎಂದ ಅವರು, ಅಂತಿಮ ಹಂತದಲ್ಲಿರುವ ನೂತನ ನ್ಯಾಯಾಲಯ ಸಂಕೀರ್ಣದ ಬಾಕಿ ಕಾಮಗಾರಿಗಳನ್ನೂ ಶೀಘ್ರ ಪೂರ್ಣಗೊಳಿಸಿ ಸಾರ್ವಜನಿಕ ಬಳಕೆಗೆ ನೀಡಬೇಕು ಎಂದು ಮನವಿ ಮಾಡಿದರು.

Category
ಕರಾವಳಿ ತರಂಗಿಣಿ