ಮಂಗಳೂರು : ಬೆಂಗಳೂರಿನ ಬಹುನಿರೀಕ್ಷಿತ ನಮ್ಮ ಮೆಟ್ರೋ ‘ಪಿಂಕ್ ಲೈನ್’ (ಗುಲಾಬಿ ಮಾರ್ಗ) ಕಾಳೇನ ಅಗ್ರಹಾರದಿಂದ ತಾವರೆಕೆರೆವರೆಗಿನ 7.5 ಕಿ.ಮೀ. ಉದ್ದದ ಮಾರ್ಗ ಉದ್ಘಾಟನೆಗೆ ಸಿದ್ಧವಾಗಿದ್ದು, ಸೆಪ್ಟೆಂಬರ್ ತಿಂಗಳಲ್ಲೇ ಸಾರ್ವಜನಿಕ ಸಂಚಾರಕ್ಕೆ ಮುಕ್ತವಾಗುವ ಸಾಧ್ಯತೆಯಿದೆ.
ಬೆಂಗಳೂರು ನಗರಾಭಿವೃದ್ಧಿ ಸಚಿವ ಕೃಷ್ಣಭೈರೇಗೌಡ, ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ ಹಾಗೂ ಶಾಸಕ ಎಂ. ಕೃಷ್ಣಪ್ಪ ಅವರು ಬನ್ನೇರುಘಟ್ಟ ರಸ್ತೆಯ ಕಾಳೇನ ಅಗ್ರಹಾರ ಮೆಟ್ರೋ ನಿಲ್ದಾಣಕ್ಕೆ ಭೇಟಿ ನೀಡಿ, ಭದ್ರತೆ ಹಾಗೂ ಸಂಚಾರ ವ್ಯವಸ್ಥೆಯನ್ನು ಪರಿಶೀಲಿಸಿದರು. ಬಳಿಕ ಅಧಿಕಾರಿಗಳೊಂದಿಗೆ ಲೋಕೋ ಪೈಲಟ್ ಕ್ಯಾಬಿನ್‌ನಲ್ಲಿ ಕುಳಿತು ಕಾಳೇನ ಅಗ್ರಹಾರದಿಂದ ತಾವರೆಕೆರೆವರೆಗೂ ಪ್ರಾಯೋಗಿಕ ಸಂಚಾರ ನಡೆಸಿ ಮಾಹಿತಿ ಪಡೆದುಕೊಂಡರು.
ಕೇಂದ್ರ ಸರ್ಕಾರದಿಂದ ಉದ್ಘಾಟನೆಯ ಅಧಿಕೃತ ದಿನಾಂಕ ನಿಗದಿಯಾಗುತ್ತಿದ್ದಂತೆಯೇ ಈ ಮಾರ್ಗವನ್ನು ಉದ್ಘಾಟಿಸಲಾಗುವುದು ಎಂದು ಸಚಿವ ಕೃಷ್ಣಭೈರೇಗೌಡ ಸ್ಪಷ್ಟಪಡಿಸಿದರು. ಮುಂಬರುವ 15 ದಿನಗಳಲ್ಲಿ ರೌಂಡಿಂಗ್ ಸ್ಟಾಕ್ (Rolling Stock) ಸುರಕ್ಷತಾ ಅನುಮತಿ ದೊರೆಯುವ ನಿರೀಕ್ಷೆಯಿದ್ದು, ಈ ತಿಂಗಳ ಅಂತ್ಯದೊಳಗೆ ಮಾರ್ಗವನ್ನು ಲೋಕಾರ್ಪಣೆಗೊಳಿಸುವ ಗುರಿ ಹೊಂದಲಾಗಿದೆ ಎಂದು ಸಂಸದ ತೇಜಸ್ವಿ ಸೂರ್ಯ ತಿಳಿಸಿದ್ದಾರೆ. ನಗರದ ಸಂಚಾರ ದಟ್ಟಣೆ ಕಡಿಮೆ ಮಾಡಲು 'ಟನಲ್ ರಸ್ತೆ'ಯಂತಹ ಯೋಜನೆಗಳಿಗಿಂತ ಇಂತಹ ವೈಜ್ಞಾನಿಕ ಸಾರ್ವಜನಿಕ ಸಾರಿಗೆ ವ್ಯವಸ್ಥೆಗಳೇ ಸೂಕ್ತ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಮೊದಲ ಹಂತದಲ್ಲಿ ಕಾಳೇನ ಅಗ್ರಹಾರ, ಹುಳಿಮಾವು, ಐಐಎಂ-ಬಿ, ಜೆ.ಪಿ. ನಗರ 4ನೇ ಹಂತ, ಜಯದೇವ ಆಸ್ಪತ್ರೆ (ಹಳದಿ ಮಾರ್ಗದ ಇಂಟರ್‌ಚೇಂಜ್) ಹಾಗೂ ತಾವರೆಕೆರೆ ಸೇರಿದಂತೆ ಒಟ್ಟು 6 ನಿಲ್ದಾಣಗಳ ನಡುವೆ ಸಂಚಾರ ಆರಂಭವಾಗಲಿದ್ದು, ಇದರಿಂದ ಬನ್ನೇರುಘಟ್ಟ ರಸ್ತೆಯ ವಾಹನ ದಟ್ಟಣೆಗೆ ದೊಡ್ಡ ಮಟ್ಟದ ಪರಿಹಾರ ಸಿಗಲಿದೆ.