image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ರಾಜ್ಯ

ಕಾಂಗ್ರೆಸ್ ಲೆಕ್ಕ ಹೈದರಾಲಿ ಲೆಕ್ಕವಾಗಲು ಬಿಡುವುದಿಲ್ಲ: ಡಾ. ಸಿ.ಟಿ. ರವಿ

ಕಾಂಗ್ರೆಸ್ ಲೆಕ್ಕ ಹೈದರಾಲಿ ಲೆಕ್ಕವಾಗಲು ಬಿಡುವುದಿಲ್ಲ: ಡಾ. ಸಿ.ಟಿ. ರವಿ

ಚಿಕ್ಕಮಗಳೂರು : ವಾಲ್ಮೀಕಿ ಅಭಿವೃದ್ಧಿ ನಿಗಮದ ಹಣದ ಅಕ್ರಮ ವರ್ಗಾವಣೆ, ಗೃಹಲಕ್ಷ್ಮಿ ಯೋಜನೆಯ ಬಾಕಿ ಅನುದಾನ, ಕೆಪಿಎಸ್‌ಸಿ ನೇಮಕಾತಿಯಲ್ಲಿನ ಅಕ್ರಮ ಹಾಗೂ ಬರ ಪರಿಹಾರ ಕ್ರಮಗಳ ವಿಚಾರದಲ್ಲಿ ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ಹೋರಾಟ ಮುಂದುವರಿಸಲಿದೆ ಎಂದು ವಿಧಾನ ಪರಿಷತ್ ಸದಸ್ಯ ಡಾ. ಸಿ.ಟಿ. ರವಿ ಹೇಳಿದರು. ಲಿಂಗಸುಗೂರಿನಲ್ಲಿ ಬಿಜೆಪಿ ಹಮ್ಮಿಕೊಂಡಿರುವ ಪಾದಯಾತ್ರೆ ಹಿನ್ನೆಲೆಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ತಮ್ಮ ಪಾದಯಾತ್ರೆ ಘೋಷಣೆಯಾದ ತಕ್ಷಣವೇ ಒಂದು ಹಂತದ ಯಶಸ್ಸು ದೊರೆತಿದೆ ಎಂದರು. ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ₹187 ಕೋಟಿ ಹಣವನ್ನು ನಕಲಿ ಖಾತೆಗಳಿಗೆ ವರ್ಗಾಯಿಸಿದ ಪ್ರಕರಣದ ಆರೋಪ ಎದುರಿಸುತ್ತಿದ್ದ ನಾಗೇಂದ್ರ ಅವರನ್ನು ಮತ್ತೆ ಸಚಿವರನ್ನಾಗಿ ಮಾಡಿರುವುದನ್ನು ಬಿಜೆಪಿ ವಿಧಾನಸಭೆ ಮತ್ತು ವಿಧಾನ ಪರಿಷತ್ತಿನಲ್ಲಿ ವಿರೋಧಿಸಿತ್ತು. ಇದೀಗ ಅವರಿಂದ ಸಚಿವ ಸ್ಥಾನದ ರಾಜೀನಾಮೆ ಪಡೆಯಲಾಗಿದ್ದು, ಇದನ್ನು ಹೋರಾಟದ ಮೊದಲ ವಿಜಯ ಎಂದು ಬಣ್ಣಿಸಿದರು. ಮುಂಚೆಯೇ ರಾಜೀನಾಮೆ ಪಡೆದಿದ್ದರೆ ಸರ್ಕಾರದ ಗೌರವ ಹೆಚ್ಚುತ್ತಿತ್ತು ಎಂದರು.

ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ಲೂಟಿಯಾದ ₹187 ಕೋಟಿ ಹಣ ಇನ್ನೂ ಸಂಪೂರ್ಣವಾಗಿ ಸರ್ಕಾರಿ ಖಜಾನೆಗೆ ವಾಪಸ್ ಬಂದಿಲ್ಲ. ಆ ಹಣ ಬ್ರಾಂಡಿ ಶಾಪ್‌ಗಳಿಗೆ, ಚಿನ್ನದ ಅಂಗಡಿಗಳಿಗೆ ಹಾಗೂ ಕಾರು ಶೋರೂಮ್‌ಗಳಿಗೆ ಹೋಗಿದೆ. ಬಡವರ ನೆರವಿಗೆ ಬರಬೇಕಾದ ಹಣ ಎಲ್ಲಿಗೆ ತಲುಪಿದೆ ಎಂಬುದರ ಬಗ್ಗೆ ಸಮಗ್ರ ತನಿಖೆ ಅಗತ್ಯವಿದೆ ಎಂದು ಪ್ರತಿಪಾದಿಸಿದರು. ಗೃಹಲಕ್ಷ್ಮಿ ಯೋಜನೆಯ ಮೂರು ತಿಂಗಳ ಅನುದಾನ ₹7,500 ಕೋಟಿ ಎಲ್ಲಿ ಹೋಯಿತು ಎಂಬುದಕ್ಕೆ ಸರ್ಕಾರ ಸ್ಪಷ್ಟ ಲೆಕ್ಕ ನೀಡಬೇಕು. ಮೂರು ತಿಂಗಳ ಬಾಕಿ ಹಣವನ್ನು ತಕ್ಷಣ ಫಲಾನುಭವಿಗಳ ಖಾತೆಗೆ ಜಮೆ ಮಾಡಬೇಕು ಎಂದು ಒತ್ತಾಯಿಸಿದರು. ಸರ್ಕಾರದ ಹಣಕಾಸು ನಿರ್ವಹಣೆಯನ್ನು ಟೀಕಿಸಿದ ಅವರು, 12 ತಿಂಗಳ ಸಂಬಳ ಕೊಡಬೇಕಾದಾಗ 10 ತಿಂಗಳ ಸಂಬಳ ಕೊಟ್ಟು, ಕೊನೆಯ ಎರಡು ತಿಂಗಳ ಹಣವನ್ನು ನುಂಗುವ 'ಹೈದರಾಲಿ ಲೆಕ್ಕ'ವನ್ನು ಸರ್ಕಾರ ತೋರಿಸುತ್ತಿದೆ. ಕಾಂಗ್ರೆಸ್ ಲೆಕ್ಕ, ಹೈದರಾಲಿ ಲೆಕ್ಕ ಒಂದೇ ಆಗುವುದಕ್ಕೆ ನಾವು ಬಿಡುವುದಿಲ್ಲ ಎಂದು ವ್ಯಂಗ್ಯವಾಡಿದರು.

ಕೆಪಿಎಸ್‌ಸಿಯಲ್ಲಿ ಭ್ರಷ್ಟಾಚಾರ ಮತ್ತು ಜಾತಿಯತೆ ನಡೆಯುತ್ತಿದೆ ಎಂಬುದು ಅಂಗೈ ಹುಣ್ಣಿನಷ್ಟು ಸ್ಪಷ್ಟವಾಗಿದೆ. ಇನ್ನು ರಾಜ್ಯದಲ್ಲಿ ಬರಪೀಡಿತ ತಾಲೂಕುಗಳನ್ನು ಘೋಷಿಸಿರುವ ಸರ್ಕಾರ ಬರ ಪರಿಹಾರಕ್ಕೆ ಇದುವರೆಗೆ ಒಂದು ರೂಪಾಯಿಯನ್ನೂ ಖರ್ಚು ಮಾಡಿಲ್ಲ ಹಾಗೂ ಈ ಘೋಷಣೆಯೂ ಕ್ರಮಬದ್ಧವಾಗಿಲ್ಲ ಎಂದು ಆಕ್ಷೇಪಿಸಿದರು. ಧರ್ಮದ ಕುರಿತು ಕಾಂಗ್ರೆಸ್ ನಾಯಕ ಬಸವರಾಜ ರಾಯರೆಡ್ಡಿ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ರವಿ, "ಜಗತ್ತಿಗೆ ಧರ್ಮ ಒಂದೇ, ಅದು ಸನಾತನ ಧರ್ಮ. ಉಳಿದವು ಮತಗಳು. ಸನಾತನ ಧರ್ಮವನ್ನು ಯಾರೂ ಸ್ಥಾಪಿಸಿಲ್ಲ, ಅದು ಸೃಷ್ಟಿಯೊಂದಿಗೆ ಇರುವ ಜೀವನ ಮೌಲ್ಯ. ಬಸವಣ್ಣನವರ 'ಕಳಬೇಡ, ಕೊಲಬೇಡ...' ಎಂಬ ವಚನವೇ ಧರ್ಮದ ಸಾರ" ಎಂದರು. ರಾಯರೆಡ್ಡಿಯವರು ಅಂಬೇಡ್ಕರ್ ಬರೆದ ‘Thoughts on Pakistan’ ಪುಸ್ತಕವನ್ನು ಓದಲಿ ಹಾಗೂ ರಾಹುಲ್ ಗಾಂಧಿಯವರು ಮನುಸ್ಮೃತಿಯಲ್ಲಿರುವ “ಯತ್ರ ನಾರ್ಯಸ್ತು ಪೂಜ್ಯಂತೇ ರಮಂತೇ ತತ್ರ ದೇವತಾಃ” ಎಂಬ ಸ್ತ್ರೀಯರ ಗೌರವದ ಆಶಯವನ್ನು ಗಮನಿಸಲಿ ಎಂದು ಸಲಹೆ ನೀಡಿದರು. ಜಾಗತಿಕ ಭಯೋತ್ಪಾದನೆ ವಿರುದ್ಧ ಕಠಿಣ ನಿಲುವು ಅಗತ್ಯವಿದ್ದು, ರಾಜಕೀಯ ಕಾರಣಕ್ಕೆ ಯಾರೂ ಮೌನ ವಹಿಸಬಾರದು ಎಂದರು.

Category
ಕರಾವಳಿ ತರಂಗಿಣಿ