ಚಿಕ್ಕಮಗಳೂರು : ಚಿಕ್ಕಮಗಳೂರಿನ ಟಿಪ್ಪು ನಗರದಲ್ಲಿ 40 ಅಡಿ ಎತ್ತರದ ಟಿಪ್ಪು ಸುಲ್ತಾನ್ ಕಟೌಟ್ ಅಳವಡಿಸಿ, ಪಾಕಿಸ್ತಾನ ಪರ ಹಾಗೂ ಪ್ರಚೋದನಕಾರಿ ಹಾಡು ಪ್ರಸಾರ ಮಾಡಿರುವ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ, ತಪ್ಪಿತಸ್ಥರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕೆಂದು ವಿಧಾನ ಪರಿಷತ್ ಸದಸ್ಯ ಡಾ. ಸಿ.ಟಿ. ರವಿ ಆಗ್ರಹಿಸಿದ್ದಾರೆ.
ರಾಷ್ಟ್ರ ಸುರಕ್ಷಾ ಸಮಿತಿ ನೇತೃತ್ವದಲ್ಲಿ ಚಿಕ್ಕಮಗಳೂರಿನಲ್ಲಿ ನಡೆದ ‘ರಾಷ್ಟ್ರಭಕ್ತರ ನಡಿಗೆ’ ಹಾಗೂ ‘ಜನಜಾಗೃತಿ ಸಭೆ’ಯ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಭಾರತದಲ್ಲಿದ್ದುಕೊಂಡು ಪಾಕಿಸ್ತಾನ ಪರ ಘೋಷಣೆ ಹಾಗೂ ಹಾಡುಗಳನ್ನು ಪ್ರಸಾರ ಮಾಡುವುದು ದೇಶ ವಿರೋಧಿ ಮನೋಭಾವನೆಯಾಗಿದೆ. ಇಂತಹ ಕೃತ್ಯ ಎಸಗುವವರನ್ನು ಮುಸ್ಲಿಂ ಸಮಾಜವೇ ಸಹಿಸಬಾರದು ಮತ್ತು ಈ ವಿಚಾರದಲ್ಲಿ ಕಾಂಗ್ರೆಸ್ ಹಾಗೂ ಸೆಕ್ಯುಲರ್ ಪಕ್ಷಗಳು ಮೌನ ವಹಿಸಿ ವೋಟ್ ಬ್ಯಾಂಕ್ ರಾಜಕಾರಣ ಮಾಡುತ್ತಿವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈದ್ ಮಿಲಾದ್ ಆಚರಣೆ ವೇಳೆ 40 ಅಡಿ ಕಟೌಟ್ ಅಳವಡಿಸಲು ಅನುಮತಿ ನೀಡಿದ ಪೊಲೀಸ್ ಇಲಾಖೆ ಹಾಗೂ ಜಿಲ್ಲಾಡಳಿತದ ನಡೆ ಸರಿಯಲ್ಲ ಎಂದ ಅವರು, ಗಣೇಶೋತ್ಸವಕ್ಕೆ ನೂರಾರು ವಿಘ್ನಗಳನ್ನು ಒಡ್ಡುವ ಆಡಳಿತ ಯಂತ್ರ ಇಂತಹ ಕಟೌಟ್‌ಗೆ ಹೇಗೆ ಅನುಮತಿ ನೀಡಿತು ಎಂದು ಪ್ರಶ್ನಿಸಿದರು. ತಿರಂಗಾ ಯಾತ್ರೆ ಹಿನ್ನೆಲೆಯಲ್ಲಿ ತಾಲೂಕು ಕಚೇರಿ ಆವರಣದಲ್ಲಿ 144 ಸೆಕ್ಷನ್ ಜಾರಿಗೊಳಿಸಿರುವುದನ್ನು ತೀವ್ರವಾಗಿ ಖಂಡಿಸಿದ ರವಿ, ದೇಶಭಕ್ತಿ ಪ್ರಕಟಿಸುವುದರ ಮೇಲೆಯೇ ನಿರ್ಬಂಧ ಹೇರುವ ಮೂಲಕ ಜಿಲ್ಲಾಡಳಿತ ಬ್ರಿಟಿಷರಂತೆ ವರ್ತಿಸುತ್ತಿದೆ ಎಂದು ಆರೋಪಿಸಿದರು.