image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ರಾಜ್ಯ

ಆದಾಯ ತೆರಿಗೆ ಇಲಾಖೆಯಿಂದ ₹700 ಕೋಟಿಗೂ ಹೆಚ್ಚು ಹಣ ಮರಳಿ ಪಡೆದ ವಿಟಿಯು

ಆದಾಯ ತೆರಿಗೆ ಇಲಾಖೆಯಿಂದ ₹700 ಕೋಟಿಗೂ ಹೆಚ್ಚು ಹಣ ಮರಳಿ ಪಡೆದ ವಿಟಿಯು

ಬೆಂಗಳೂರು: ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯವು (ವಿಟಿಯು) ಆದಾಯ ತೆರಿಗೆ ಇಲಾಖೆಯೊಂದಿಗಿನ 14 ವರ್ಷಗಳ ಸುದೀರ್ಘ ಕಾನೂನು ವಿವಾದದಲ್ಲಿ ಜಯಗಳಿಸಿದ್ದು, ತನಗೆ ಸೇರಿದ ₹700 ಕೋಟಿಗೂ ಹೆಚ್ಚಿನ ಹಣವನ್ನು ಯಶಸ್ವಿಯಾಗಿ ಮರಳಿ ಪಡೆದಿದೆ. ಮಾಹಿತಿ ಹಕ್ಕು (ಆರ್‌ಟಿಐ) ಕಾಯ್ದೆಯಡಿ ಪಡೆದ ನಿರ್ಣಾಯಕ ದಾಖಲೆಯೊಂದು ಈ ಸುದೀರ್ಘ ಹೋರಾಟದಲ್ಲಿ ವಿಶ್ವವಿದ್ಯಾಲಯದ ಕೈಹಿಡಿದಿದೆ.

ತೆರಿಗೆ ಪಾವತಿಸಿಲ್ಲ ಎಂಬ ಆರೋಪದ ಮೇಲೆ 2012-13ರಲ್ಲಿ ಆದಾಯ ತೆರಿಗೆ ಇಲಾಖೆಯು ವಿಟಿಯು ಬ್ಯಾಂಕ್ ಖಾತೆಗಳನ್ನು ಸ್ಥಗಿತಗೊಳಿಸಿತ್ತು. ಸುಮಾರು 250 ಕೋಟಿ ರೂ. ತೆರಿಗೆ ಪಾವತಿಸುವಂತೆ ನೋಟಿಸ್ ನೀಡಿತ್ತು. ಇದರಿಂದ ವಿಶ್ವವಿದ್ಯಾಲಯವು ಹಲವಾರು ವರ್ಷಗಳ ಕಾಲ ತೀವ್ರ ಆರ್ಥಿಕ ಸಂಕಷ್ಟ ಎದುರಿಸುವಂತಾಗಿತ್ತು. ವಿಟಿಯು 1999 ರಲ್ಲೇ ಸೆಕ್ಷನ್ 12(ಎ) ಅಡಿಯಲ್ಲಿ ತೆರಿಗೆ ವಿನಾಯಿತಿಗಾಗಿ ಅರ್ಜಿ ಸಲ್ಲಿಸಿತ್ತಾದರೂ, ನ್ಯಾಯಮಂಡಳಿಯಿಂದ ಸುಪ್ರೀಂ ಕೋರ್ಟ್‌ವರೆಗೆ ಅದನ್ನು ಸಾಬೀತುಪಡಿಸಲು ಅಗತ್ಯ ದಾಖಲೆಗಳಿರಲಿಲ್ಲ.

ಇತ್ತೀಚಿಗೆ ಉಪಕುಲಪತಿ ಪ್ರೊ. ಎಸ್. ವಿದ್ಯಾಶಂಕರ್ ಅವರ ಸೂಚನೆಯಂತೆ ಹಳೆಯ ಕಡತಗಳನ್ನು ಪರಿಶೀಲಿಸಿದಾಗ 1999ರ ಅರ್ಜಿಯ ಸುಳಿವು ಸಿಕ್ಕಿತ್ತು. ತಕ್ಷಣವೇ ಆದಾಯ ತೆರಿಗೆ ಇಲಾಖೆಗೆ ಆರ್‌ಟಿಐ ಅರ್ಜಿ ಸಲ್ಲಿಸಿ 1999ರ ನಮೂದು ರಿಜಿಸ್ಟರ್ (Entry Register) ಪ್ರತಿಯನ್ನು ಪಡೆದುಕೊಳ್ಳಲಾಯಿತು. ಈ ಅಧಿಕೃತ ಸಾಕ್ಷ್ಯಾಧಾರದ ಬಲದಿಂದಾಗಿ ವಿಶ್ವವಿದ್ಯಾಲಯವು ತನ್ನ ಹಣವನ್ನು ಸಂಪೂರ್ಣವಾಗಿ ಮರಳಿ ಪಡೆಯಲು ಸಾಧ್ಯವಾಗಿದೆ.

ಖಾತೆಗಳನ್ನು ಸ್ಥಗಿತಗೊಳಿಸಿದ ಸಮಯದಲ್ಲಿ ವಿಟಿಯು ಖಾತೆಗಳಲ್ಲಿದ್ದ 450 ಕೋಟಿ ರೂ. ಹಾಗೂ ಇತರೆ 250 ಕೋಟಿ ರೂ. ಸೇರಿ ಒಟ್ಟು 700 ಕೋಟಿ ರೂ.ಗೂ ಅಧಿಕ ಮೊತ್ತ ಸಂಸ್ಥೆಯ ಕೈಸೇರಿದೆ. ಈ ಮರುಪಡೆಯಲಾದ ಕಾರ್ಪಸ್ ನಿಧಿಯನ್ನು 10 ವರ್ಷಗಳ ಅವಧಿಗೆ ರಾಷ್ಟ್ರೀಕೃತ ಬ್ಯಾಂಕ್‌ನಲ್ಲಿ ಠೇವಣಿಯಾಗಿ ಇರಿಸಲು ವಿಟಿಯು ನಿರ್ಧರಿಸಿದೆ. 11ನೇ ವರ್ಷದಿಂದ ಬರುವ ಬಡ್ಡಿಯನ್ನು ವಿಶ್ವವಿದ್ಯಾಲಯದ ಸಿಬ್ಬಂದಿಯ ವೇತನಕ್ಕೆ ಬಳಸಿಕೊಳ್ಳಲು ಯೋಜಿಸಲಾಗಿದ್ದು, ಇದು ವಿಟಿಯುಗೆ ದೀರ್ಘಾವಧಿಯ ಆರ್ಥಿಕ ಸ್ಥಿರತೆಯನ್ನು ತಂದುಕೊಡಲಿದೆ.

Category
ಕರಾವಳಿ ತರಂಗಿಣಿ