ಚಿಕ್ಕಮಗಳೂರು : ಚಿಕ್ಕಮಗಳೂರು ತಾಲೂಕಿನ ಹುಲಿಕೆರೆ ಗ್ರಾಮದ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರು ಇಂದು ಪಕ್ಷ ತೊರೆದು ಬಿಜೆಪಿ ಸೇರ್ಪಡೆಯಾಗಿದ್ದಾರೆ. ಚಿಕ್ಕಮಗಳೂರಿನ ತಮ್ಮ ನಿವಾಸದಲ್ಲಿ ವಿಧಾನ ಪರಿಷತ್ ಸದಸ್ಯ ಡಾ. ಸಿ.ಟಿ. ರವಿ ಅವರು ಹೊಸದಾಗಿ ಪಕ್ಷಕ್ಕೆ ಆಗಮಿಸಿದ ಮುಖಂಡರಾದ ಜಯಣ್ಣ ಹಾಗೂ ಕಾರ್ಯಕರ್ತರಿಗೆ ಬಿಜೆಪಿ ಧ್ವಜ ನೀಡಿ ಆತ್ಮೀಯವಾಗಿ ಸ್ವಾಗತಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಸಿ.ಟಿ. ರವಿ, "ನಾನು ಚುನಾವಣೆಯಲ್ಲಿ ಸೋತಿರುವ ಅವಧಿಯಲ್ಲಿ ಇವರೆಲ್ಲರೂ ಪಕ್ಷಕ್ಕೆ ಸೇರ್ಪಡೆಯಾಗುವ ಮೂಲಕ ಗೆದ್ದ ಎತ್ತಿನ ಬಾಲ ಹಿಡಿಯುವವರಲ್ಲ ಎಂಬುದನ್ನು ಸಾಬೀತುಪಡಿಸಿದ್ದಾರೆ. ಕಳೆದ 20 ವರ್ಷಗಳ ಶಾಸಕಾವಧಿಯಲ್ಲಿ ನಾವು ಮಾಡಿದ ಅಭಿವೃದ್ಧಿ ಕೆಲಸಗಳನ್ನು ನೆನಪಿನಲ್ಲಿಟ್ಟುಕೊಂಡು ಪಕ್ಷಕ್ಕೆ ಬಂದಿರುವ ಇವರ ಬೆಂಬಲ ಹಾಗೂ ಪ್ರೀತಿಯನ್ನು ಹೃತ್ಪೂರ್ವಕವಾಗಿ ಅಭಿನಂದಿಸುತ್ತೇನೆ" ಎಂದರು.
ತಮ್ಮ ಅವಧಿಯ ಯೋಜನೆಗಳ ಕುರಿತು ಪ್ರಸ್ತಾಪಿಸಿದ ಅವರು, ಅಯ್ಯನಕೆರೆ ಹೆಚ್ಚುವರಿ ಕೋಡಿ ನೀರಿನ ಬಳಕೆಯ ಬೆರಟಿಕೆರೆ ಯೋಜನೆಗಾಗಿ ಮೂರು ವರ್ಷಗಳ ಹಿಂದೆಯೇ 9.90 ಕೋಟಿ ರೂಪಾಯಿ ಮಂಜೂರು ಮಾಡಿಸಿ, ಮೂರನೇ ಒಂದು ಭಾಗದಷ್ಟು ಹಣ ಬಿಡುಗಡೆಗೊಳಿಸಲಾಗಿತ್ತು. ಆದರೆ ಇಚ್ಛಾಶಕ್ತಿಯ ಕೊರತೆಯಿಂದಾಗಿ ಆ ಕಾಮಗಾರಿ ಇಂದಿಗೂ ಪೂರ್ಣಗೊಂಡಿಲ್ಲ ಎಂದು ಕಳವಳ ವ್ಯಕ್ತಪಡಿಸಿದರು. ಕನಕ ಭವನ, ಅಂಬೇಡ್ಕರ್ ಭವನ, ಕುರುಹಿನ ಶೆಟ್ಟಿ ಭವನ ಸೇರಿದಂತೆ ವಿವಿಧ ಸಮಾಜಗಳ ಭವನ, ಕಲ್ಲೇಶ್ವರ ಸ್ವಾಮಿ ಹಾಗೂ ಗೋಪಾಲಕೃಷ್ಣ ದೇವಸ್ಥಾನಗಳ ಅಭಿವೃದ್ಧಿಗೆ ಮತ್ತು ರಸ್ತೆ ನಿರ್ಮಾಣಕ್ಕೆ ಅನುದಾನ ತರಲಾಗಿತ್ತು ಎಂಬುದನ್ನು ಸ್ಮರಿಸಿದರು.
ನಮ್ಮ ರಾಜಕಾರಣ ಎಂದರೆ ಹಿಂದುತ್ವಕ್ಕೆ ಬದ್ಧತೆ ಮತ್ತು ಅಭಿವೃದ್ಧಿಗೆ ಆದ್ಯತೆ. ನಾನು ಎಂದಿಗೂ ಜಾತಿ ರಾಜಕಾರಣ ಮಾಡದೆ ಪ್ರೀತಿ ಹಾಗೂ ಅಭಿವೃದ್ಧಿಯ ರಾಜಕಾರಣ ಮಾಡಿದ್ದೇನೆ. ಬರುವ ಚುನಾವಣೆಯಲ್ಲಿ ಬೂತ್ ಮಟ್ಟದಲ್ಲಿ ನಮ್ಮ ಪಕ್ಷದ ತಾಕತ್ತು ಏನೆಂಬುದನ್ನು ತೋರಿಸಲಿದ್ದು, ಕಾರ್ಯಕರ್ತರ ಸೇರ್ಪಡೆ ಪಕ್ಷಕ್ಕೆ ಆನೆಬಲ ತಂದಿದೆ ಎಂದು ರವಿ ವಿಶ್ವಾಸ ವ್ಯಕ್ತಪಡಿಸಿದರು. ಈ ಕಾರ್ಯಕ್ರಮದಲ್ಲಿ ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಈಶ್ವರಹಳ್ಳಿ ಮಹೇಶ್, ಮುಖಂಡರಾದ ರವಿ ಡಿ. ಕಾರೆಹಳ್ಳಿ, ನಿಶಾಂತ್, ದಿಲೀಪ್, ಮಂಜುನಾಥ್ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.