ಹಾಸನ : ಹಾಸನ ಜಿಲ್ಲೆಯಲ್ಲಿ ಗ್ರಾಮ ಪಂಚಾಯಿತಿ ವಾರ್ಡ್‌ಗಳ ಮೀಸಲಾತಿ ನಿಗದಿ ವಿಚಾರ ಶಾಸಕ ಎಚ್.ಡಿ. ರೇವಣ್ಣ ಹಾಗೂ ಜಿಲ್ಲಾಧಿಕಾರಿ ಕೆ.ಎಸ್. ಲತಾ ಕುಮಾರಿ ನಡುವೆ ತೀವ್ರ ವಾಕ್ಸಮರಕ್ಕೆ ಕಾರಣವಾಗಿದ್ದು, ಸದ್ಯ ಈ ವಿವಾದ ಮಹಿಳಾ ಆಯೋಗದ ಅಂಗಳ ತಲುಪಿದೆ. ತಹಸೀಲ್ದಾರ್ ಅವರ ಶಿಫಾರಸುಗಳನ್ನು ಕಡೆಗಣಿಸಿ, ಆಡಳಿತ ಪಕ್ಷದ ರಾಜಕೀಯ ಒತ್ತಡಕ್ಕೆ ಮಣಿದು ಕಾನೂನು ಉಲ್ಲಂಘಿಸಿ ಮೀಸಲಾತಿ ಬದಲಾಯಿಸಲಾಗಿದೆ ಎಂದು ರೇವಣ್ಣ ಆಪಾದಿಸಿದ್ದರು. ಅಲ್ಲದೆ "ಇಂಥ ಡಿಸಿಯನ್ನು ಎಲ್ಲಿಂದ ಹಿಡಿದುಕೊಂಡು ಬಂದಿದ್ದಾರೋ ಗೊತ್ತಿಲ್ಲ" ಎಂದು ಬಹಿರಂಗವಾಗಿ ಟೀಕಿಸಿದ್ದರು. ಇದಕ್ಕೆ ಪ್ರತಿಯಾಗಿ ಜಿಲ್ಲಾಧಿಕಾರಿ ಲತಾ ಕುಮಾರಿ ಅವರು, "ನಿಮ್ಮನ್ನು ಹಿಡಿತದಲ್ಲಿಟ್ಟುಕೊಳ್ಳಲು ಆಗಲಿಲ್ಲವೆಂದರೆ ನಿಮ್ಮನ್ನು ದ್ವೇಷಿಸುತ್ತಾರೆ" ಎಂಬ ಪೋಸ್ಟ್ ಹಂಚಿಕೊಂಡು ಪರೋಕ್ಷವಾಗಿ ಶಾಸಕರಿಗೆ ಟಾಂಗ್ ನೀಡಿದ್ದರು.
ಶಾಸಕ ರೇವಣ್ಣ ಅವರ ಈ ಹೇಳಿಕೆಯು ಜಿಲ್ಲೆಯಾದ್ಯಂತ ಪರ-ವಿರುದ್ಧ ಚರ್ಚೆಗೆ ಗ್ರಾಸವಾಗಿದೆ. ಮಹಿಳಾ ಅಧಿಕಾರಿಯನ್ನು ಏಕವಚನದಲ್ಲಿ ನಿಂದಿಸಿ, ತೇಜೋವಧೆ ಮಾಡಲಾಗಿದೆ ಎಂದು ದಲಿತ ಸಂಘರ್ಷ ಸಮಿತಿ, ದಲಿತ ವಿಮೋಚನಾ ಮಾನವ ಹಕ್ಕುಗಳ ವೇದಿಕೆ ಮತ್ತು ವಿವಿಧ ಪ್ರಗತಿಪರ ಸಂಘಟನೆಗಳು ತೀವ್ರ ಖಂಡನೆ ವ್ಯಕ್ತಪಡಿಸಿವೆ. ಶಾಸಕರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿರುವ ಸಂಘಟನೆಗಳು, ಮಹಿಳಾ ಆಯೋಗ ಹಾಗೂ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಆಯೋಗಕ್ಕೆ ದೂರು ಸಲ್ಲಿಸಲು ಸಭೆ ನಡೆಸಿ ನಿರ್ಧರಿಸಿವೆ.
ಇನ್ನೊಂದೆಡೆ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಂ. ಶಿವಲಿಂಗೇಗೌಡ ಹಾಗೂ ಸಂಸದ ಶ್ರೇಯಸ್ ಎಂ. ಪಟೇಲ್ ಅವರು ಶಾಸಕರ ನಡೆಗೆ ಖಂಡನೆ ವ್ಯಕ್ತಪಡಿಸಿದ್ದಾರೆ. ಜಿಲ್ಲಾಧಿಕಾರಿಗಳು ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸುತ್ತಿದ್ದು, ಜನಪ್ರತಿನಿಧಿಗಳು ಲಘುವಾಗಿ ಮಾತನಾಡುವುದು ಸರಿಯಲ್ಲ ಎಂದು ಶ್ರೇಯಸ್ ಪಟೇಲ್ ಅಭಿಪ್ರಾಯಪಟ್ಟಿದ್ದಾರೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅಧಿಕಾರಿಯ ನಿರ್ಧಾರದಲ್ಲಿ ಲೋಪವಿದ್ದರೆ ಮುಖ್ಯ ಕಾರ್ಯದರ್ಶಿ, ಚುನಾವಣಾ ಆಯೋಗ ಅಥವಾ ನ್ಯಾಯಾಲಯದ ಮೆಟ್ಟಿಲೇರಲು ಅವಕಾಶವಿರುವಾಗ, ಸಾರ್ವಜನಿಕವಾಗಿ ನಿಂದಿಸುವುದು ಎಷ್ಟು ಸಮಂಜಸ ಎಂಬ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಎದ್ದಿದೆ. ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡಿರುವ ರೇವಣ್ಣ, ಅಧಿಕಾರಿಗಳು ಜನಪ್ರತಿನಿಧಿಗಳಿಗೆ ಗೌರವ ನೀಡಬೇಕೆಂದು ಆಗ್ರಹಿಸಿದ್ದು, ಸರಕಾರ ಹಾಗೂ ರಾಜ್ಯಪಾಲರಿಗೆ ದೂರು ನೀಡುವುದಾಗಿ ತಿಳಿಸಿದ್ದಾರೆ. ಇತ್ತ ಜಿಲ್ಲಾಧಿಕಾರಿ ಲತಾ ಕುಮಾರಿ ಅವರು ಮಾಧ್ಯಮಗಳ ಪ್ರಶ್ನೆಗೆ ನಿಯಮಾವಳಿ ವ್ಯಾಪ್ತಿಯಲ್ಲೇ ಸ್ಪಷ್ಟನೆ ನೀಡಿರುವುದಾಗಿ ತಿಳಿಸಿದ್ದು, ಈ ರಾಜಕೀಯ ಹಾಗೂ ಆಡಳಿತಾತ್ಮಕ ಸಂಘರ್ಷವು ರಾಜ್ಯ ಮಟ್ಟದಲ್ಲೂ ದೊಡ್ಡ ಸದ್ದು ಮಾಡುತ್ತಿದೆ.