ಮೈಸೂರು : ಮಂಗಳೂರು ರೈಲ್ವೆ ವಿಭಾಗದ ಆಡಳಿತಾತ್ಮಕ ಜವಾಬ್ದಾರಿಯನ್ನು ಕರ್ನಾಟಕದ ಮೈಸೂರು ವಿಭಾಗಕ್ಕೆ ವರ್ಗಾಯಿಸಿರುವುದಕ್ಕೆ ಸಂಬಂಧಿಸಿದಂತೆ ತಮ್ಮ ನಿಲುವಿನಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ ಸ್ಪಷ್ಟಪಡಿಸಿದ್ದಾರೆ. ಕೇರಳದ ಯುಡಿಎಫ್, ಸಿಪಿಐ ಹಾಗೂ ಸಿಪಿಎಂ ಸೇರಿದಂತೆ ಎಲ್ಲಾ ವಿರೋಧ ಪಕ್ಷಗಳು ತಮ್ಮ ವಿರುದ್ಧ ಎಷ್ಟೇ ಪ್ರತಿಭಟನೆ ನಡೆಸಿ ರಾಜೀನಾಮೆಗೆ ಆಗ್ರಹಿಸಿದರೂ ತಾವು ಕೈಗೊಂಡ ನಿರ್ಧಾರದಿಂದ ಹಿಂದೆ ಸರಿಯುವುದಿಲ್ಲ ಎಂದಿರುವ ಅವರು, ಭಾರತ ಸರ್ಕಾರದ ಮಂತ್ರಿಯಾಗಿ ದಶಕಗಳಿಂದ ನೆನೆಗುದಿಗೆ ಬಿದ್ದಿದ್ದ ಆಡಳಿತಾತ್ಮಕ ಅಡಚಣೆಗಳನ್ನು ಸರಿಪಡಿಸುವ ಕೆಲಸ ಮಾಡಿದ್ದೇನೆ ಎಂದು ಸಮರ್ಥಿಸಿಕೊಂಡಿದ್ದಾರೆ.
ಕೇರಳ ರಾಜ್ಯಕ್ಕೆ ಯಾವುದೇ ಅಪಚಾರ ಎಸಗಿಲ್ಲ ಎಂದು ಸ್ಪಷ್ಟಪಡಿಸಿದ ಸಚಿವರು, ಕೇರಳದಲ್ಲಿ 20 ಮೀನುಗಾರಿಕಾ ಬಂದರುಗಳಿದ್ದು, ಅಲ್ಲಿನ ಬಜೆಟ್‌ನಲ್ಲಿ ಅದಕ್ಕೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಆದರೆ ಕರ್ನಾಟಕಕ್ಕೆ ಇರುವ ಏಕೈಕ ಮಂಗಳೂರು ಬಂದರಿನ ಆಮದು-ರಫ್ತು ಮತ್ತು ಸರಕು ಸಾಗಣೆಯ ಅನುಕೂಲಕ್ಕಾಗಿ ಈ ಕ್ರಮ ಅನಿವಾರ್ಯವಾಗಿತ್ತು ಎಂದಿದ್ದಾರೆ. ಮಂಗಳೂರು ದೊಡ್ಡ ಶೈಕ್ಷಣಿಕ ಹಾಗೂ ವಾಣಿಜ್ಯ ಕೇಂದ್ರವಾಗಿದ್ದರೂ ಅದರ ಆಡಳಿತ ವ್ಯವಸ್ಥೆ 350 ಕಿ.ಮೀ ದೂರದ ಪಾಲಕ್ಕಾಡ್‌ನಲ್ಲಿತ್ತು. ಈಗ ಅದನ್ನು ಕರ್ನಾಟಕದವರೇ ಉಸ್ತುವಾರಿ ನೋಡಿಕೊಳ್ಳಲು ಕೇಂದ್ರ ಸರ್ಕಾರ ಅನುಮತಿ ನೀಡಿದ್ದು, ಇದರಿಂದ ರೈಲ್ವೆ ಇಲಾಖೆಯಲ್ಲಿ ಸ್ಥಳೀಯರಿಗೂ ಉತ್ತಮ ಅವಕಾಶಗಳು ದೊರೆಯಲಿವೆ ಎಂದು ವಿವರಿಸಿದರು.
ಈ ಬದಲಾವಣೆಯು ಕಳೆದ 25 ವರ್ಷಗಳಿಂದ ನಡೆಯುತ್ತಿದ್ದ ನಿರಂತರ ಹೋರಾಟದ ಫಲವಾಗಿದೆ. ಪ್ರಸ್ತುತ ಸಂಸದ ಕ್ಯಾ. ಬ್ರಿಜೇಶ್ ಚೌಟ ಹಾಗೂ ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್ ಅವರ ಮನವಿಯಂತೆ, ತಾವು ಮೂವರು ಜನರಲ್ ಮ್ಯಾನೇಜರ್‌ಗಳನ್ನು ಸ್ಥಳಕ್ಕೆ ಕರೆದೊಯ್ದು ಸಾಧಕ-ಬಾಧಕಗಳ ಬಗ್ಗೆ ತಾಂತ್ರಿಕ ಚರ್ಚೆ ನಡೆಸಿದ ನಂತರವೇ ಈ ತೀರ್ಮಾನಕ್ಕೆ ಬರಲಾಗಿದೆ. ಇದರಲ್ಲಿ ಯಾವುದೇ ಸ್ವಜನಪಕ್ಷಪಾತವಿಲ್ಲ ಹಾಗೂ ಈ ನಿರ್ಧಾರದ ಲಾಭ-ನಷ್ಟಗಳ ಕುರಿತು ಒಂದು ವರ್ಷದ ನಂತರ ಚರ್ಚೆ ನಡೆಸಬಹುದು ಎಂದು ಸಚಿವರು ತಿಳಿಸಿದ್ದಾರೆ.