image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ರಾಜ್ಯ

'ಚಿಟ್ಟೆ ಚರ್ಮದ ಕಾಯಿಲೆ' ಸಂಶೋಧನೆಗೆ ICMRನಿಂದ ₹5.50 ಕೋಟಿ ಅನುದಾನ

'ಚಿಟ್ಟೆ ಚರ್ಮದ ಕಾಯಿಲೆ' ಸಂಶೋಧನೆಗೆ ICMRನಿಂದ ₹5.50 ಕೋಟಿ ಅನುದಾನ

ಬೆಂಗಳೂರು : ಚಿಕ್ಕಬಳ್ಳಾಪುರ ಜಿಲ್ಲೆಯ ಮುದ್ದೇನಹಳ್ಳಿಯ ಶ್ರೀ ಮಧುಸೂದನ ಸಾಯಿ ವೈದ್ಯಕೀಯ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಗೆ (SMSIMSR) ಅಪರೂಪದ ಆನುವಂಶಿಕ ಚರ್ಮರೋಗವಾದ 'ಎಪಿಡರ್ಮೊಲಿಸಿಸ್ ಬುಲ್ಲೋಸಾ' ಕುರಿತು ಸಂಶೋಧನೆ ನಡೆಸಲು ಭಾರತೀಯ ವೈದ್ಯಕೀಯ ಸಂಶೋಧನಾ ಸಂಸ್ಥೆಯು (ICMR) ನಾಲ್ಕು ವರ್ಷಗಳ ಅವಧಿಗೆ 5.50 ಕೋಟಿ ರೂಪಾಯಿ ಅನುದಾನ ಮಂಜೂರು ಮಾಡಿದೆ. 'ಒನ್ ವರ್ಲ್ಡ್‌ ಒನ್ ಫ್ಯಾಮಿಲಿ ಮಿಷನ್' ನೇತೃತ್ವದ ಈ ಸಂಸ್ಥೆಯಲ್ಲಿ ‘ಎಪಿಡರ್ಮೊಲಿಸಿಸ್ ಬುಲ್ಲೋಸಾ ಕಾಯಿಲೆಗೆ ಕೈಗೆಟುಕುವ ದರದಲ್ಲಿ ರೋಗಪತ್ತೆ ಮತ್ತು ಚಿಕಿತ್ಸೆ’ ಹೆಸರಿನ ಯೋಜನೆಯನ್ನು ಡಾ. ವಂಶೀಕೃಷ್ಣ ಯೆನಮಂದ್ರ ಪ್ರಧಾನ ಸಂಶೋಧಕರಾಗಿ ಮುನ್ನಡೆಸಲಿದ್ದು, ಡಾ. ದಿವ್ಯಾ ಶೇಷಾದ್ರಿ, ಡಾ. ಮನೋಜ್ ಶ್ರೀನಿವಾಸ್ ಮತ್ತು ಡಾ. ಶರತ್ ಚಂದ್ರ ಕೊಂಡ ಸಹ-ಸಂಶೋಧಕರಾಗಿ ಕಾರ್ಯನಿರ್ವಹಿಸಲಿದ್ದಾರೆ.

'ಚಿಟ್ಟೆ ಚರ್ಮದ ಕಾಯಿಲೆ' ಎಂದೂ ಕರೆಯಲ್ಪಡುವ ಈ ರೋಗದಲ್ಲಿ ರೋಗಿಯ ಚರ್ಮವು ಚಿಟ್ಟೆಯ ರೆಕ್ಕೆಯಷ್ಟೇ ಸೂಕ್ಷ್ಮವಾಗಿದ್ದು, ಸಣ್ಣ ಉಜ್ಜುವಿಕೆ ಅಥವಾ ಗಾಯದಿಂದಲೂ ತೀವ್ರ ಗುಳ್ಳೆಗಳು ಉಂಟಾಗುತ್ತವೆ. ಇದು ದೀರ್ಘಕಾಲೀನ ಗಾಯ, ಪೌಷ್ಟಿಕಾಂಶದ ಕೊರತೆ ಹಾಗೂ ಚರ್ಮದ ಕ್ಯಾನ್ಸರ್‌ಗೆ ಕಾರಣವಾಗಬಹುದು. ಭಾರತದಲ್ಲಿ ಈ ರೋಗಕ್ಕೆ ರಾಷ್ಟ್ರೀಯ ಮಟ್ಟದ ನೋಂದಣಿ ವ್ಯವಸ್ಥೆ ಮತ್ತು ವಿಶೇಷ ವೈದ್ಯಕೀಯ ಸೇವೆಗಳು ಸೀಮಿತವಾಗಿದ್ದು, ರೋಗ ಪತ್ತೆ ವಿಳಂಬವಾಗುತ್ತಿದೆ. ದೇಶದಲ್ಲಿ ಪ್ರತಿ 114 ಜನರಲ್ಲಿ ಒಬ್ಬರಿಗೆ ಇಂತಹ ವಂಶವಾಹಿ ರೋಗಗಳನ್ನು ಮುಂದಿನ ಪೀಳಿಗೆಗೆ ವರ್ಗಾಯಿಸುವ ಅಪಾಯವಿದೆ ಎಂದು ಅಂದಾಜಿಸಲಾಗಿದೆ.

ಈ ಯೋಜನೆಯು ಪ್ರಸ್ತುತ ಇರುವ ದುಬಾರಿ ವಂಶವಾಹಿ ಪರೀಕ್ಷೆಗಳಿಗಿಂತ ಶೇ 60ಕ್ಕೂ ಹೆಚ್ಚು ಕಡಿಮೆ ವೆಚ್ಚದಲ್ಲಿ ನೂತನ ಆನುವಂಶಿಕ ಪರೀಕ್ಷಾ ಕ್ರಮಗಳನ್ನು ಅಭಿವೃದ್ಧಿಪಡಿಸುವ ಗುರಿ ಹೊಂದಿದೆ. ಇದರಿಂದ ಗರ್ಭದಲ್ಲಿರುವ ಶಿಶುವಿನಲ್ಲೇ ಕಾಯಿಲೆ ಪತ್ತೆಹಚ್ಚುವುದು, ಜೀವಕೋಶಗಳ ಸ್ವಯಂ-ಸರಿಪಡಿಸುವ ಪ್ರಕ್ರಿಯೆಯ ಅಧ್ಯಯನ ಹಾಗೂ ಕಡಿಮೆ ವೆಚ್ಚದ ಔಷಧಗಳನ್ನು ಬಳಸಿಕೊಂಡು ರೋಗಿಗೆ ಅನುಗುಣವಾಗಿ ಪುನರುತ್ಪಾದಕ ಚಿಕಿತ್ಸೆ ನೀಡುವುದು ಸಾಧ್ಯವಾಗಲಿದೆ. ಕಾಯಿಲೆಯ ಆರಂಭಿಕ ಪತ್ತೆ, ಆನುವಂಶಿಕ ಸಲಹೆ ಹಾಗೂ ಕೈಗೆಟುಕುವ ದರದ ಚಿಕಿತ್ಸೆಯನ್ನು ಒಂದೇ ಚೌಕಟ್ಟಿನಡಿ ತರಲು ಈ ಸಂಶೋಧನೆ ಶ್ರಮಿಸಲಿದೆ.

Category
ಕರಾವಳಿ ತರಂಗಿಣಿ