ಬೆಂಗಳೂರು : ರಾಜ್ಯದ ಪೊಲೀಸ್ ಸಿಬ್ಬಂದಿಗೆ ಆಂಧ್ರಪ್ರದೇಶ ಮತ್ತು ತೆಲಂಗಾಣ ಮಾದರಿಯಲ್ಲಿ ಶೇಕಡಾ 50 ರಷ್ಟು ಕಷ್ಟ ಭತ್ಯೆಯನ್ನು ಹೆಚ್ಚಿಸಲು ಕರ್ನಾಟಕ ಸರ್ಕಾರ ನಿರ್ಧರಿಸಿದೆ ಎಂದು ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ಘೋಷಿಸಿದ್ದಾರೆ. ಬೆಂಗಳೂರಿನ ಮಾಣಿಕ್ ಷಾ ಪರೇಡ್ ಮೈದಾನದಲ್ಲಿ ಶುಕ್ರವಾರ ಆಯೋಜಿಸಲಾಗಿದ್ದ ಕರ್ನಾಟಕ ರಾಜ್ಯ ಪೊಲೀಸರ ಸಮಗ್ರ ಸಾಮರ್ಥ್ಯವರ್ಧನೆ ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು. ಜನರನ್ನು ರಕ್ಷಿಸುವ ಪೊಲೀಸ್ ಸಿಬ್ಬಂದಿ ಉತ್ತಮ ಜೀವನ ನಡೆಸಲು ಸಾಧ್ಯವಾಗಬೇಕು ಹಾಗೂ ಅವರ ಆರ್ಥಿಕ ಅಗತ್ಯಗಳಿಗೆ ಮೊದಲು ಆದ್ಯತೆ ನೀಡಲಾಗುವುದು ಎಂದು ಅವರು ಸ್ಪಷ್ಟಪಡಿಸಿದರು.
ರಾಷ್ಟ್ರೀಯ ಭದ್ರತಾ ಪಡೆ (NSG) ಮೂಲಕ ನಮ್ಮ ಪೊಲೀಸರಿಗೆ ವಿಶೇಷ ತರಬೇತಿ ನೀಡುತ್ತಿರುವುದಕ್ಕೆ ಧನ್ಯವಾದ ಸಲ್ಲಿಸಿದ ಮುಖ್ಯಮಂತ್ರಿಗಳು, ಸಜ್ಜನರನ್ನು ರಕ್ಷಿಸುವುದು ಮತ್ತು ದುರ್ಜನರನ್ನು ಶಿಕ್ಷಿಸುವುದು ಧರ್ಮದ ಕಾರ್ಯವಾಗಿದೆ ಎಂದರು. ಸಮಾಜದಲ್ಲಿ ಅಶಾಂತಿ ಉಂಟಾದಾಗ ಹಾಗೂ ಕಾನೂನು ಸುವ್ಯವಸ್ಥೆ ಹದಗೆಟ್ಟಾಗ ಪ್ರಾಮಾಣಿಕರನ್ನು ರಕ್ಷಿಸಲು ಪೊಲೀಸರು ತಮ್ಮ ಪ್ರಾಣವನ್ನೇ ಪಣಕ್ಕಿಟ್ಟು ಮುಂಚೂಣಿಯಲ್ಲಿ ನಿಲ್ಲುತ್ತಾರೆ. ಕರ್ನಾಟಕ ಪೊಲೀಸರು ತಮ್ಮ ದಕ್ಷತೆ, ಪರಿಣಾಮಕಾರಿತ್ವ ಮತ್ತು ಕರ್ತವ್ಯ ನಿಷ್ಠೆಯಿಂದ ದೇಶಕ್ಕೇ ಹೆಮ್ಮೆಯಾಗಿದ್ದು, ಎನ್‍ಎಸ್‍ಜಿ ತರಬೇತಿಯು ಅವರ ಸಾಮರ್ಥ್ಯವನ್ನು ಮತ್ತಷ್ಟು ಹೆಚ್ಚಿಸಲಿದೆ ಎಂದು ಶ್ಲಾಘಿಸಿದರು.
ಸೈಬರ್ ಅಪರಾಧಗಳ ಹೆಚ್ಚಳವನ್ನು ನಿಯಂತ್ರಿಸಲು ತಂತ್ರಜ್ಞಾನ ಹಾಗೂ ಡ್ರೋನ್‌ಗಳನ್ನು ಬಳಸಲಾಗುತ್ತಿದೆ ಎಂದು ತಿಳಿಸಿದ ಶಿವಕುಮಾರ್, ಬೆಂಗಳೂರು ಜಾಗತಿಕ ಮಟ್ಟದ ನಗರವಾಗಿರುವುದರಿಂದ ಇಲ್ಲಿ ವಿಶ್ವದ ಪ್ರಮುಖ ಸಂಸ್ಥೆಗಳು ಮತ್ತು ಲಕ್ಷಾಂತರ ವಿದೇಶಿಯರು ನಮ್ಮ ಮೇಲಿನ ನಂಬಿಕೆಯಿಂದ ನೆಲೆಸಿದ್ದಾರೆ ಎಂದರು. ನಗರದಲ್ಲಿ ಬಹುಮಹಡಿ ಕಟ್ಟಡಗಳು ಹೆಚ್ಚಾಗುತ್ತಿದ್ದು, ಬೆಂಕಿ ಅವಘಡ ಅಥವಾ ಭಯೋತ್ಪಾದಕ ದಾಳಿಯಂತಹ ತುರ್ತು ಸಂದರ್ಭಗಳಲ್ಲಿ ಹೆಲಿಪ್ಯಾಡ್‌ಗಳನ್ನು ಬಳಸಿ ಜೀವ ಉಳಿಸಲು ಅನುಕೂಲವಾಗುವಂತೆ ಕಟ್ಟಡಗಳ ಮೇಲೆ ಹೆಲಿಪ್ಯಾಡ್ ನಿರ್ಮಾಣಕ್ಕೆ ಜಾಗ ಒದಗಿಸಬೇಕು ಎಂದು ಡೆವಲಪರ್‌ಗಳಲ್ಲಿ ವಿನಂತಿಸಿದರು. ಇಂತಹ ಪರಿಸ್ಥಿತಿಗಳನ್ನು ನಿಭಾಯಿಸಲು ಮಿಲಿಟರಿ ಹಾಗೂ ವಾಯುಪಡೆ ಅಧಿಕಾರಿಗಳೊಂದಿಗೆ ಒಪ್ಪಂದಕ್ಕಾಗಿ ಮಾತುಕತೆ ನಡೆಸಲಾಗುವುದು ಎಂದು ಅವರು ಹೇಳಿದರು. ಪೋಲಿಸ್ ಸಿಬ್ಬಂದಿಗೆ ಉತ್ತಮ ವಸತಿ ಸೌಲಭ್ಯಗಳನ್ನು ಕಲ್ಪಿಸುವುದು ಮತ್ತು ಅವರ ಮೇಲಿರುವ ಮಾನಸಿಕ ಒತ್ತಡವನ್ನು ಕಡಿಮೆ ಮಾಡುವುದು ಸರ್ಕಾರದ ಆದ್ಯತೆಯಾಗಿದ್ದು, ಶೀಘ್ರದಲ್ಲೇ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿಗಳು ಭರವಸೆ ನೀಡಿದರು.