image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ರಾಜ್ಯ

ಪೊಲೀಸರ ಸಂಕಷ್ಟ ಭತ್ಯೆ ಶೇ. 50 ಹೆಚ್ಚಳ: ಡಿ.ಕೆ. ಶಿವಕುಮಾರ್

ಪೊಲೀಸರ ಸಂಕಷ್ಟ ಭತ್ಯೆ ಶೇ. 50 ಹೆಚ್ಚಳ: ಡಿ.ಕೆ. ಶಿವಕುಮಾರ್

ಬೆಂಗಳೂರು: ರಾಜ್ಯದ ಪೊಲೀಸರ ಸಂಕಷ್ಟ ಭತ್ಯೆಯನ್ನು ಆಂಧ್ರಪ್ರದೇಶ ಹಾಗೂ ತೆಲಂಗಾಣ ಮಾದರಿಯಲ್ಲಿ ಶೇ. 50ರಷ್ಟು ಹೆಚ್ಚಳ ಮಾಡಲಾಗುವುದು ಎಂದು ಡಿ.ಕೆ. ಶಿವಕುಮಾರ್ ಘೋಷಿಸಿದ್ದಾರೆ. ಬೆಂಗಳೂರಿನ ಮಾಣಿಕ್ ಶಾ ಮೈದಾನದಲ್ಲಿ ಶುಕ್ರವಾರ ನಡೆದ ಕರ್ನಾಟಕ ರಾಜ್ಯ ಪೊಲೀಸರ ಸಮಗ್ರ ಸಾಮರ್ಥ್ಯ ವೃದ್ಧಿ ತರಬೇತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ನಗರದ ಗಗನಚುಂಬಿ ಕಟ್ಟಡಗಳಲ್ಲಿ ಬೆಂಕಿ ಅನಾಹುತ ಅಥವಾ ಭಯೋತ್ಪಾದನಾ ದಾಳಿಯಂತಹ ತುರ್ತು ಸಂದರ್ಭಗಳು ಎದುರಾದರೆ ಜೀವ ರಕ್ಷಣೆಗೆ ಹೆಲಿಪ್ಯಾಡ್‌ಗಳನ್ನು ಬಳಸಿಕೊಳ್ಳುವ ಸಂಬಂಧ ವಾಯುಸೇನಾ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಲಾಗುವುದು ಎಂದು ತಿಳಿಸಿದರು. ಎತ್ತರದ ಕಟ್ಟಡಗಳ ಮೇಲೆ ಹೆಲಿಪ್ಯಾಡ್ ನಿರ್ಮಾಣಕ್ಕೆ ಸ್ಥಳಾವಕಾಶ ಒದಗಿಸುವಂತೆ ಬಿಲ್ಡರ್‌ಗಳು ಮತ್ತು ಡೆವಲಪರ್‌ಗಳಲ್ಲಿ ಮನವಿ ಮಾಡಿದ ಅವರು, ಕಾನೂನು ಚೌಕಟ್ಟಿನಲ್ಲಿ ಸರ್ಕಾರ ಅಗತ್ಯ ಅನುಮತಿ ನೀಡಲಿದೆ ಎಂದರು. ಹೆಚ್ಚುತ್ತಿರುವ ಡಿಜಿಟಲ್ ಅಪರಾಧಗಳನ್ನು ಎದುರಿಸಲು ಪೊಲೀಸ್ ಇಲಾಖೆ ತಾಂತ್ರಿಕವಾಗಿ ಅಪ್‌ಡೇಟ್ ಆಗುವುದು ಅಗತ್ಯವಾಗಿದೆ. ರಾಜ್ಯದ 7 ಕೋಟಿ ಜನಸಂಖ್ಯೆ ಮತ್ತು ಇಲ್ಲಿರುವ 2 ಲಕ್ಷ ವಿದೇಶಿಗರ ಭದ್ರತೆಯನ್ನು ಕಾಪಾಡುವುದು ಸರ್ಕಾರದ ಕರ್ತವ್ಯವಾಗಿದೆ. ಪೊಲೀಸರ ಆರ್ಥಿಕ ಅಗತ್ಯಗಳಿಗೆ ಮೊದಲ ಆದ್ಯತೆ ನೀಡಲಿದ್ದು, ಗೃಹ ಇಲಾಖೆಯು ಅಗತ್ಯ ಸೌಲಭ್ಯಗಳನ್ನು ಒದಗಿಸಲಿದೆ ಎಂದು ಭರವಸೆ ನೀಡಿದರು.

Category
ಕರಾವಳಿ ತರಂಗಿಣಿ