image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ರಾಜ್ಯ

ಸ್ವಾವಲಂಬನೆಗೆ ಸಾಕ್ಷಿಯಾದ ಕಬ್ಬಳಿ-ಗುಣಸಾಗರ ಗ್ರಾಮಗಳು : ₹15 ಲಕ್ಷ ದೇಣಿಗೆ ಸಂಗ್ರಹಿಸಿ ಕೆರೆ ತುಂಬಿಸಿದ ಗ್ರಾಮಸ್ಥರು

ಸ್ವಾವಲಂಬನೆಗೆ ಸಾಕ್ಷಿಯಾದ ಕಬ್ಬಳಿ-ಗುಣಸಾಗರ ಗ್ರಾಮಗಳು : ₹15 ಲಕ್ಷ ದೇಣಿಗೆ ಸಂಗ್ರಹಿಸಿ ಕೆರೆ ತುಂಬಿಸಿದ ಗ್ರಾಮಸ್ಥರು

ಚಿಕ್ಕಮಗಳೂರು : ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಕಬ್ಬಳಿ ಮತ್ತು ಗುಣಸಾಗರ ಗ್ರಾಮಸ್ಥರು ಸರ್ಕಾರದ ನೆರವಿಗೂ ಕಾಯದೆ ತಾವೇ ದೇಣಿಗೆ ಸಂಗ್ರಹಿಸಿ ತಮ್ಮ ಊರಿನ ಜೀವನಾಡಿಯಾದ ಕೆರೆಯನ್ನು ತುಂಬಿಸುವ ಮೂಲಕ ಹೊಸ ಅಭಿವೃದ್ಧಿ ಮಾದರಿ ಸೃಷ್ಟಿಸಿದ್ದಾರೆ. ಮಳೆ ಅಭಾವದಿಂದ ಕುಡಿಯುವ ನೀರಿಗೆ ಪರದಾಡುವ ಪರಿಸ್ಥಿತಿ ಎದುರಾದಾಗ, ಸಮಾನ ಮನಸ್ಕರು ಗ್ರಾಮಸ್ಥರನ್ನು ಒಗ್ಗೂಡಿಸಿ ಸುಮಾರು 60 ರಿಂದ 70 ಎಕರೆ ವಿಸ್ತೀರ್ಣದ ಕೆರೆಗೆ ನೀರು ಹರಿಸುವ ಸಾಹಸಿಕ ಯೋಜನೆಯನ್ನು ಪೂರ್ಣಗೊಳಿಸಿದ್ದಾರೆ.

ಸಮೀಪದಲ್ಲೇ ಹರಿಯುವ ವೇದಾವತಿ ನದಿಯಲ್ಲಿ ಎತ್ತಿನಹೊಳೆ ಯೋಜನೆಯಿಂದ ಹರಿದುಬರುತ್ತಿದ್ದ ಹೆಚ್ಚುವರಿ ವ್ಯರ್ಥ ನೀರನ್ನು ಪಂಪ್ ಮಾಡುವ ಮೂಲಕ ಕಬ್ಬಳಿ-ಗುಣಸಾಗರ ಕೆರೆಗೆ ತುಂಬಿಸಲಾಗುತ್ತಿದೆ. ಈ ಗ್ರಾಮಗಳವರೇ ಆದ ಶಿಕ್ಷಕ ಉದಯ ಕುಮಾರ್, ಸಿವಿಲ್ ಎಂಜಿನಿಯರ್ ಮಧು ದೊಡ್ಡಮನೆ, ಕ್ಯಾಬ್ ಚಾಲಕ ಕುಮಾರಸ್ವಾಮಿ ಹಾಗೂ ಕೃಷಿಕ ಜಿ.ಎಸ್. ಯತೀಶ್ ಅವರ ನೇತೃತ್ವದಲ್ಲಿ ಈ ಯೋಜನೆ ರೂಪುಗೊಂಡಿದೆ. ಗ್ರಾಮಸ್ಥರು ತಮ್ಮ ಶಕ್ತಿಗೆ ಅನುಸಾರವಾಗಿ ₹50 ರಿಂದ ₹50,000 ವರೆಗೆ ನೀಡಿ ಒಟ್ಟು ₹15 ಲಕ್ಷ ದೇಣಿಗೆ ಸಂಗ್ರಹಿಸಿದ್ದಾರೆ.

ಸಂಗ್ರಹವಾದ ಮೊತ್ತದಲ್ಲಿ ಸಿವಿಲ್ ಕಾಮಗಾರಿ, 102 ಪೈಪ್‌ಗಳು, ನೀರೆತ್ತುವ ಪಂಪ್ ಹಾಗೂ ಪ್ರತ್ಯೇಕ ಟ್ರಾನ್ಸ್‌ಫಾರ್ಮರ್ ಅಳವಡಿಸಿ ಕೆರೆಗೆ ನೀರು ಹರಿಸಲಾಗುತ್ತಿದೆ. ಕಳೆದೊಂದು ವಾರದಿಂದ ಪಂಪಿಂಗ್ ನಡೆಯುತ್ತಿದ್ದು, ಈಗಾಗಲೇ ಕೆರೆಯಲ್ಲಿ ಶೇ.40 ರಷ್ಟು ನೀರು ಸಂಗ್ರಹವಾಗಿದೆ. ಮುಂದಿನ 15 ದಿನಗಳಲ್ಲಿ ಕೆರೆ ಸಂಪೂರ್ಣ ಭರ್ತಿಯಾಗುವ ನಿರೀಕ್ಷೆಯಿದ್ದು, ಇದರಿಂದ ಕುಡಿಯುವ ನೀರಿನ ಸಮಸ್ಯೆ ನೀಗುವುದರ ಜೊತೆಗೆ ಜಾನುವಾರುಗಳಿಗೆ ಆಸರೆ ಹಾಗೂ ಅಂತರ್ಜಲ ಮಟ್ಟ ಹೆಚ್ಚಾಗಲಿದೆ. ಮುಂದಿನ ದಿನಗಳಲ್ಲಿ ಇದರ ಸದ್ಬಳಕೆಗಾಗಿ 'ಕೆರೆ ಅಭಿವೃದ್ಧಿ ಸಂಘ' ಸ್ಥಾಪಿಸಲು ಹಾಗೂ ರೈತರ ಬೆಳೆಗಳಿಗೆ ಸೂಕ್ತ ಬೆಲೆ ದೊರಕಿಸಲು ಸಹಕಾರ ಒಕ್ಕೂಟ ರಚಿಸಲು ನಿರ್ಧರಿಸಲಾಗಿದೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.

Category
ಕರಾವಳಿ ತರಂಗಿಣಿ