ಬೆಂಗಳೂರು : ಆರ್‌ಎಸ್‌ಎಸ್ ನೊಂದಣಿ ವಿಷಯವಾಗಿ ಸಚಿವ ಪ್ರಿಯಾಂಕ್ ಖರ್ಗೆ ನೀಡಿದ್ದ ಹೇಳಿಕೆ ಮತ್ತು ಹಾಕಿದ್ದ ಸವಾಲಿಗೆ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ತೀವ್ರ ತಿರುಗೇಟು ನೀಡಿದ್ದಾರೆ. ಯಾವುದೋ ಸಣ್ಣಪುಟ್ಟ ಪುಸ್ತಕಗಳನ್ನು ಓದಿ ಮಾತನಾಡುವ ಬದಲು, ಡಾ. ಬಿ.ಆರ್. ಅಂಬೇಡ್ಕರ್ ಬರೆದ ಸಂವಿಧಾನದ ದೊಡ್ಡ ಪುಸ್ತಕವನ್ನು ಮೊದಲು ಓದಿ ಬನ್ನಿ ಎಂದು ಅವರು ಸಲಹೆ ನೀಡಿದ್ದಾರೆ.
ಸಂಘಟನೆಗಳು ಕಡ್ಡಾಯವಾಗಿ ನೊಂದಣಿಯಾಗಲೇಬೇಕು ಎಂದು ಸಂವಿಧಾನದ ಯಾವ ಭಾಗದಲ್ಲಿ ಹೇಳಲಾಗಿದೆ ಎಂಬುದನ್ನು ಖರ್ಗೆ ಮೊದಲು ತೋರಿಸಲಿ ಎಂದು ಪ್ರಶ್ನಿಸಿದ ಅಶೋಕ್, ಆರ್‌ಎಸ್‌ಎಸ್ ಬ್ರಿಟಿಷರ ಕಾಲದಲ್ಲೇ ಸ್ಥಾಪನೆಯಾದ ಸಂಸ್ಥೆಯಾಗಿದ್ದು, ಅಂದಿನ ಬಲಿಷ್ಠ ಬ್ರಿಟಿಷ್ ಸರ್ಕಾರವಾಗಲಿ ಅಥವಾ ದೇಶದ ಪ್ರಭಾವಿ ಪ್ರಧಾನಿಗಳಾಗಲಿ ಇದನ್ನು ತಡೆಯಲು ಸಾಧ್ಯವಾಗಿಲ್ಲ ಎಂದು ನೆನಪಿಸಿದರು.
ಖರ್ಗೆ ಅವರ ನೊಂದಣಿ ತರ್ಕವನ್ನು ತರಾಟೆಗೆ ತೆಗೆದುಕೊಂಡ ಅವರು, ಬೆಂಗಳೂರಿನಲ್ಲಿರುವ ಕ್ಲಬ್‌ಗಳು, ಚರ್ಚ್‌ಗಳು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಟ್ಟಿದ ಅಹಿಂದ ಸಂಘಟನೆ ಹಾಗೂ ಮೊಹರಂ ಮೆರವಣಿಗೆಗಳಿಗೆ ನೊಂದಣಿ ಇದೆಯೇ ಎಂದು ನೇರ ಟಾಂಗ್ ನೀಡಿದರು. ಕಾಂಗ್ರೆಸ್ ನಾಯಕರು ಕೇವಲ ಪ್ರಚಾರಕ್ಕಾಗಿ ಮತ್ತು ಜನರನ್ನು ದಾರಿ ತಪ್ಪಿಸಲು ಇಂತಹ ಅಪ್ರಸ್ತುತ ಹೇಳಿಕೆಗಳನ್ನು ನೀಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.