image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ರಾಜ್ಯ

ಗ್ರಾಮೀಣ ಜಲ ಆಸ್ತಿಗಳ ನಿರ್ವಹಣೆಗೆ ಜಿಐಎಸ್ ತಂತ್ರಾಂಶ ಲೋಕಾರ್ಪಣೆ

ಗ್ರಾಮೀಣ ಜಲ ಆಸ್ತಿಗಳ ನಿರ್ವಹಣೆಗೆ ಜಿಐಎಸ್ ತಂತ್ರಾಂಶ ಲೋಕಾರ್ಪಣೆ

ಬೆಂಗಳೂರು: ಗ್ರಾಮೀಣ ಭಾಗದ ಜಲ ಆಸ್ತಿಗಳ ವೈಜ್ಞಾನಿಕ ನಿರ್ವಹಣೆ ಹಾಗೂ ನಕಲಿ ಬಿಲ್‌ಗಳಿಗೆ ಕಡಿವಾಣ ಹಾಕುವ ಉದ್ದೇಶದಿಂದ ಗ್ರಾಮೀಣಾಭಿವೃದ್ಧಿ ಇಲಾಖೆಯು ಭೌಗೋಳಿಕ ಮಾಹಿತಿ ವ್ಯವಸ್ಥೆ (ಜಿಐಎಸ್) ಆಧಾರಿತ ಮೊಬೈಲ್ ಮತ್ತು ವೆಬ್ ಅಪ್ಲಿಕೇಷನ್ ಅನ್ನು ಅನುಷ್ಠಾನಕ್ಕೆ ತಂದಿದೆ. ವಿಕಾಸಸೌಧದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಚಿವ ಈಶ್ವರ್ ಖಂಡ್ರೆ ಈ ಹೊಸ ತಂತ್ರಾಂಶವನ್ನು ಲೋಕಾರ್ಪಣೆ ಮಾಡಿದರು.

ರಾಜ್ಯದಲ್ಲಿರುವ 3 ಲಕ್ಷಕ್ಕೂ ಅಧಿಕ ಗ್ರಾಮೀಣ ಜಲ ಆಸ್ತಿಗಳನ್ನು ಸೆಪ್ಟೆಂಬರ್ ಅಂತ್ಯದೊಳಗೆ ಜಿಯೋ ಟ್ಯಾಗ್ ಮಾಡಿ ಡಿಜಿಟಲೀಕರಿಸುವ ಗುರಿ ಹೊಂದಲಾಗಿದ್ದು, ಈಗಾಗಲೇ ಮೊದಲ ಹಂತದ ಪರಿಶೀಲನೆಯಲ್ಲಿ 70 ಸಾವಿರಕ್ಕೂ ಹೆಚ್ಚು ಸ್ವತ್ತುಗಳ ದಾಖಲೀಕರಣ ಪೂರ್ಣಗೊಂಡಿದೆ. ಪಾರದರ್ಶಕತೆ ಕಾಯ್ದುಕೊಳ್ಳಲು ವ್ಯವಸ್ಥೆಯಲ್ಲಿ 3 ಹಂತದ ಪರಿಶೀಲನೆ ನಿಗದಿಪಡಿಸಲಾಗಿದೆ. ಮೊದಲ ಹಂತದಲ್ಲಿ ಎಂಜಿನಿಯರ್‌ಗಳು ಶೇ. 100ರಷ್ಟು ಸ್ವತ್ತುಗಳನ್ನು ಖುದ್ದು ಪರಿಶೀಲಿಸಿದರೆ, 2ನೇ ಹಂತದಲ್ಲಿ ಸಹಾಯಕ ಕಾರ್ಯಪಾಲಕ ಎಂಜಿನಿಯರ್‌ಗಳು ಶೇ. 5ರಷ್ಟು ಹಾಗೂ 3ನೇ ಹಂತದಲ್ಲಿ ಕಾರ್ಯಪಾಲಕ ಎಂಜಿನಿಯರ್‌ಗಳು ಶೇ. 2ರಷ್ಟು ಯಾದೃಚ್ಛಿಕ (Random) ತಪಾಸಣೆ ನಡೆಸಲಿದ್ದಾರೆ. ಯಾವುದೇ ಹಂತದಲ್ಲಿ ಲೋಪ ಕಂಡುಬಂದಲ್ಲಿ ಸಂಬಂಧಪಟ್ಟ ಗುತ್ತಿಗೆದಾರರು ಹಾಗೂ ಅಧಿಕಾರಿಗಳನ್ನು ನೇರ ಹೊಣೆಗಾರರನ್ನಾಗಿ ಮಾಡಲಾಗುತ್ತದೆ.

ಕರ್ನಾಟಕ ದೂರ ಸಂವೇದಿ ಆನ್ವಯಿಕ ಕೇಂದ್ರ (KSRSAC) ಸಹಯೋಗದೊಂದಿಗೆ ಅಭಿವೃದ್ಧಿಪಡಿಸಲಾಗಿರುವ ಈ ತಂತ್ರಾಂಶವು 5 ಮೀಟರ್ ನಿಖರತೆಯೊಂದಿಗೆ ಜಿಯೋ ಟ್ಯಾಗ್ ಮಾಡಲು ನೆರವಾಗುತ್ತದೆ. ಇದರಿಂದ ಕಾಮಗಾರಿ ನಡೆಸದೆ ನಕಲಿ ಬಿಲ್ ಮಾಡುವುದನ್ನು ತಡೆಯಲು ಸಾಧ್ಯವಾಗಲಿದ್ದು, ಕೊಳವೆಬಾವಿ, ಓವರ್ ಹೆಡ್ ಟ್ಯಾಂಕ್, ಪಂಪ್ ಹೌಸ್, ಜಲ ಶುದ್ಧೀಕರಣ ಘಟಕ ಹಾಗೂ ಕೆರೆಗಳು ಸೇರಿದಂತೆ ಎಲ್ಲಾ ಜಲ ಮೂಲಗಳ ಭೌತಿಕ ಸ್ಥಿತಿ ಮತ್ತು ಕಾರ್ಯಕ್ಷಮತೆಯನ್ನು ನಿಖರವಾಗಿ ಮೇಲ್ವಿಚಾರಣೆ ಮಾಡಲು ನೆರವಾಗಲಿದೆ.

Category
ಕರಾವಳಿ ತರಂಗಿಣಿ