ಬೆಂಗಳೂರು : ಕೃಷಿ ಪ್ರಾಯೋಗಿಕ ಪರೀಕ್ಷೆಯಲ್ಲಿ ಲೋಪಗಳು ನಡೆದಿರುವ ಬಗ್ಗೆ ಅಭ್ಯರ್ಥಿಗಳು ಹಾಗೂ ಪೋಷಕರಿಂದ ದೂರುಗಳು ಬಂದಿರುವ ಹಿನ್ನೆಲೆಯಲ್ಲಿ ಸರ್ಕಾರ ಮರು ಪರೀಕ್ಷೆ ನಡೆಸಿರುವುದು ವಿಧಾನ ಪರಿಷತ್‌ನಲ್ಲಿ ಬಹಿರಂಗವಾಗಿದೆ. ವಿಧಾನ ಪರಿಷತ್ ಸದಸ್ಯ ಡಾ. ರವಿ ಸಿ.ಟಿ. ಅವರು ಕೇಳಿದ ಪ್ರಶ್ನೆಗೆ ಕೃಷಿ ಸಚಿವರು ನೀಡಿರುವ ಉತ್ತರದಲ್ಲಿ ಈ ಮಾಹಿತಿ ಹೊರಬಿದ್ದಿದೆ.
ರಾಜ್ಯದ 25 ಕೇಂದ್ರಗಳಲ್ಲಿ ಐದು ಕೃಷಿ ವಿಶ್ವವಿದ್ಯಾಲಯಗಳ ವ್ಯಾಪ್ತಿಯಲ್ಲಿ ಒಟ್ಟು 38,073 ವಿದ್ಯಾರ್ಥಿಗಳು ಈ ಪ್ರಾಯೋಗಿಕ ಪರೀಕ್ಷೆಗೆ ಹಾಜರಾಗಿದ್ದರು. ಇದರಲ್ಲಿ ಬೆಂಗಳೂರಿನ ಜಿಕೆವಿಕೆ ವ್ಯಾಪ್ತಿಯಲ್ಲಿ 23,593, ಧಾರವಾಡ ವ್ಯಾಪ್ತಿಯಲ್ಲಿ 5,266, ಶಿವಮೊಗ್ಗದ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ ವ್ಯಾಪ್ತಿಯಲ್ಲಿ 4,214, ರಾಯಚೂರು ವ್ಯಾಪ್ತಿಯಲ್ಲಿ 2,707 ಹಾಗೂ ಮಂಡ್ಯ ವ್ಯಾಪ್ತಿಯಲ್ಲಿ 2,293 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ.
ಶಿವಮೊಗ್ಗ ವಿಶ್ವವಿದ್ಯಾಲಯದ ವ್ಯಾಪ್ತಿಯ ಹಿರಿಯೂರು ಕೇಂದ್ರದಲ್ಲಿ ಪರೀಕ್ಷಾ ಲೋಪಗಳಾಗಿವೆ ಎಂದು ಅಭ್ಯರ್ಥಿಗಳು ಹಾಗೂ ಪೋಷಕರು ಮನವಿ ಸಲ್ಲಿಸಿರುವುದನ್ನು ಸರ್ಕಾರ ದೃಢಪಡಿಸಿದೆ. ಈ ಕುರಿತು ಯಾವುದೇ ತನಿಖೆ ನಡೆಸಲಾಗಿಲ್ಲ ಎಂದು ಸ್ಪಷ್ಟಪಡಿಸಿರುವ ಸರ್ಕಾರ, ಕೃಷಿ ಕೋಟಾದ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ನಿಯಮಾನುಸಾರ ಮತ್ತೊಮ್ಮೆ ಮರು ಪರೀಕ್ಷೆ ನಡೆಸುವಂತೆ ವಿಶ್ವವಿದ್ಯಾಲಯಕ್ಕೆ ನಿರ್ದೇಶನ ನೀಡಿತ್ತು. ಸರ್ಕಾರದ ನಿರ್ದೇಶನದಂತೆ 2026ರ ಜೂನ್ 1ರಂದು ಮರು ಪರೀಕ್ಷೆಯನ್ನು ನಡೆಸಲಾಗಿದೆ ಎಂದು ಸಚಿವರು ತಿಳಿಸಿದ್ದಾರೆ.