ಬೆಂಗಳೂರು : ಖ್ಯಾತ ಉದ್ಯಮಿ ಹಾಗೂ ಕಾನ್ಫಿಡೆಂಟ್ ಗ್ರೂಪ್ ಸಂಸ್ಥಾಪಕ ಸಿ.ಜೆ. ರಾಯ್ ಅವರ ಆತ್ಮಹತ್ಯೆ ಪ್ರಕರಣದ ತನಿಖೆಯನ್ನು ವಿಶೇಷ ತನಿಖಾ ತಂಡ (ಎಸ್‌ಐಟಿ) ಪೂರ್ಣಗೊಳಿಸಿದ್ದು, ಮ್ಯಾಜಿಸ್ಟ್ರೇಟ್‌ಗೆ ಅಂತಿಮ ವರದಿ ಸಲ್ಲಿಸಲು ಸಿದ್ಧತೆ ನಡೆಸಿದೆ. ಬನ್ನೇರುಘಟ್ಟ ರಸ್ತೆಯಲ್ಲಿದ್ದ ತಮ್ಮ ರೆಸಾರ್ಟ್ ನಿರ್ವಹಣೆ ಹೊಣೆ ಹೊತ್ತಿದ್ದ ನಂಬಿಕಸ್ಥ ಆಪ್ತನಿಂದಾದ ಕೋಟ್ಯಂತರ ರೂಪಾಯಿ ವಂಚನೆ ಹಾಗೂ ಆದಾಯ ತೆರಿಗೆ ಇಲಾಖೆಗೆ (ಐಟಿ) ಆದಾಯದ ಮೂಲಗಳ ಲೆಕ್ಕ ಒಪ್ಪಿಸಲು ಎದುರಾದ ತೀವ್ರ ಮಾನಸಿಕ ಒತ್ತಡವೇ ಅವರ ಈ ನಿರ್ಧಾರಕ್ಕೆ ಪ್ರಮುಖ ಕಾರಣ ಎಂದು ಎಸ್‌ಐಟಿ ತನಿಖೆಯಲ್ಲಿ ಪತ್ತೆಯಾಗಿದೆ.
ತಮ್ಮ ರೆಸಾರ್ಟ್ ನಿರ್ವಹಿಸುತ್ತಿದ್ದ ಆಪ್ತನ ವಂಚನೆ ಬಯಲಾದಾಗ ಆತನನ್ನು ದೂರವಿಟ್ಟಿದ್ದ ರಾಯ್ ಅವರ ವಿರುದ್ಧವೇ ಆತ ಪೊಲೀಸ್ ದೂರು ನೀಡಿದ್ದನು. ಈ ಬೆಳವಣಿಗೆ ರಾಯ್ ಅವರ ಮನಸ್ಸಿಗೆ ತೀವ್ರ ಘಾಸಿ ಉಂಟುಮಾಡಿತ್ತು. ಮತ್ತೊಂದೆಡೆ, ಐಟಿ ದಾಳಿಗೆ ಕೆಲ ತಿಂಗಳ ಮುನ್ನವೇ ಕಂಪನಿಯ ಮುಖ್ಯ ಲೆಕ್ಕ ಪರಿಶೋಧಕ ಕೆಲಸ ತೊರೆದಿದ್ದರಿಂದ, ತೆರಿಗೆ ಅಧಿಕಾರಿಗಳಿಗೆ ಆದಾಯದ ಮೂಲಗಳ ನಿಖರ ದಾಖಲೆ ಒದಗಿಸಲು ಅವರಿಗೆ ಸಾಧ್ಯವಾಗಿರಲಿಲ್ಲ. ಇದರಿಂದಾಗಿ ತೀವ್ರ ಮಾನಸಿಕ ವ್ಯಾಕುಲತೆಗೆ ಒಳಗಾಗಿದ್ದ ಅವರು ಮನಃಶಾಸ್ತ್ರಜ್ಞರಿಂದ ಚಿಕಿತ್ಸೆಯನ್ನೂ ಪಡೆದುಕೊಂಡಿದ್ದರು.
ನಿಮ್ಹಾನ್ಸ್ ತಜ್ಞರ ಅಭಿಪ್ರಾಯ ಹಾಗೂ ಉದ್ಯಮ, ವೈಯಕ್ತಿಕ ಬದುಕಿನ ಎಲ್ಲ ಆಯಾಮಗಳನ್ನು ಪರಿಶೀಲಿಸಿರುವ ಎಸ್‌ಐಟಿ, ಉದ್ಯಮ ವ್ಯವಹಾರದಲ್ಲಾದ ತೀವ್ರ ಮಾನಸಿಕ ಒತ್ತಡವೇ ಸಾವಿಗೆ ಪ್ರಧಾನ ಕಾರಣ ಎಂದು ತೀರ್ಮಾನಿಸಿದೆ. ತೆರಿಗೆ ಅಧಿಕಾರಿಗಳು ಕಾನೂನು ನಿಯಮಾನುಸಾರವೇ ಕರ್ತವ್ಯ ನಿರ್ವಹಿಸಿರುವುದರಿಂದ ಯಾರ ಮೇಲೆಯೂ ಆತ್ಮಹತ್ಯೆ ಪ್ರಚೋದನೆ ಆರೋಪ ಹೊರಿಸಲಾಗಿಲ್ಲ. ದೇಶ-ವಿದೇಶಗಳಲ್ಲಿ ಉದ್ಯಮ ಸಾಮ್ರಾಜ್ಯ ಕಟ್ಟಿದ್ದ ರಾಯ್ ಅವರು ಜಾನುವಾರಿ 30ರಂದು ಬೆಂಗಳೂರಿನ ತಮ್ಮ ಕಚೇರಿಯಲ್ಲಿ ಗುಂಡಿಟ್ಟುಕೊಂಡು ಆತ್ಮಹತ್ಯೆಗೆ ಶರಣಾಗಿದ್ದರು.