ಕುಷ್ಟಗಿ : ಕುಷ್ಟಗಿ ತಾಲೂಕಿನಲ್ಲಿ ಶಿಕ್ಷಕರ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಸಿದ್ಧತೆ ನಡೆಸುತ್ತಿರುವ ಉದ್ಯೋಗಾಕಾಂಕ್ಷಿಗಳಿಗೆ ಕಂದಾಯ ಇಲಾಖೆಯ ಪ್ರಮಾಣಪತ್ರ ವಿತರಣಾ ತಂತ್ರಾಂಶದಲ್ಲಿ ಉಂಟಾಗಿರುವ ತಾಂತ್ರಿಕ ದೋಷ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಅಭ್ಯರ್ಥಿಗಳು ಆನ್ಲೈನ್ನಲ್ಲಿ ಜಾತಿ ಮತ್ತು ಆದಾಯ ಪ್ರಮಾಣಪತ್ರಕ್ಕೆ ಅರ್ಜಿ ಸಲ್ಲಿಸುವಾಗ ಉದ್ದೇಶದ ಕಾಲಂನಲ್ಲಿ "ನೌಕರಿ" ಎಂದು ಆಯ್ಕೆ ಮಾಡಿದರೂ, ವಿತರಿಸಲಾಗುತ್ತಿರುವ ಅಂತಿಮ ಪ್ರಮಾಣಪತ್ರದಲ್ಲಿ "ವಿದ್ಯಾಭ್ಯಾಸ" ಎಂದು ನಮೂದಾಗುತ್ತಿದೆ. ಶಿಕ್ಷಕರ ನೇಮಕಾತಿ ಪ್ರಕ್ರಿಯೆಯಲ್ಲಿ "ವಿದ್ಯಾಭ್ಯಾಸಕ್ಕಾಗಿ" ಎಂದು ನಮೂದಾಗಿರುವ ಪ್ರಮಾಣಪತ್ರಗಳನ್ನು ಪರಿಗಣಿಸುವುದಿಲ್ಲ ಎಂಬ ನಿಯಮವಿರುವುದರಿಂದ ಅಭ್ಯರ್ಥಿಗಳಲ್ಲಿ ಆತಂಕ ಮೂಡಿದೆ. ಕೆಲವರು ಹಳೆಯ ಪ್ರಮಾಣಪತ್ರ ರದ್ದುಗೊಳಿಸಿ ಹೊಸದಾಗಿ ಅರ್ಜಿ ಸಲ್ಲಿಸಿದರೂ ಮತ್ತೆ ಅದೇ ದೋಷ ಎದುರಾಗುತ್ತಿದ್ದು, ಅರ್ಜಿಗಳು ತಿರಸ್ಕೃತಗೊಳ್ಳುವ ಭೀತಿ ಎದುರಾಗಿದೆ.
ಈ ಹಿನ್ನೆಲೆಯಲ್ಲಿ ಶಿಕ್ಷಕ ಹುದ್ದೆ ಆಕಾಂಕ್ಷಿಗಳು ತಹಸೀಲ್ದಾರ್ ಅಶೋಕ ಶಿಗ್ಗಾಂವಿ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದರು. ತಂತ್ರಾಂಶದಲ್ಲಿನ ಸಮಸ್ಯೆಯನ್ನು ತಕ್ಷಣವೇ ಪರಿಹರಿಸಿ, ನೇಮಕಾತಿಗೆ ಅಗತ್ಯವಿರುವ ಸೂಕ್ತ ಪ್ರಮಾಣಪತ್ರಗಳನ್ನು ಸಮಯಕ್ಕೆ ಸರಿಯಾಗಿ ವಿತರಿಸಬೇಕೆಂದು ಒತ್ತಾಯಿಸಿದರು. ಮನವಿ ಸಲ್ಲಿಸುವ ಸಂದರ್ಭದಲ್ಲಿ ಛತ್ರಪ್ಪ ಮೇಗೂರು, ಸಂಗಪ್ಪ ಅಂಗಡಿ, ಶ್ರೀಕಾಂತ್ ಕಿರಗಿ, ಮಾನಪ್ಪ ಮದಲಗಟ್ಟಿ, ಮಲ್ಲೇಶ ನಿಡಗುಂದಿ, ಶ್ರೀಧರ ಚಳ್ಳಾರಿ, ರುದ್ರಗೌಡ ಬಿಜ್ಜಳ, ನಾಗರಾಜ ಬಂಡಿ ಸೇರಿದಂತೆ ಹಲವು ಉದ್ಯೋಗಾಕಾಂಕ್ಷಿಗಳು ಉಪಸ್ಥಿತರಿದ್ದರು.