ಬೆಂಗಳೂರು: ರಾಜ್ಯದಲ್ಲಿ ನಡೆದ ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯು ದೋಷದಿಂದ ಕೂಡಿದ್ದು, ಲಕ್ಷಾಂತರ ಮತದಾರರನ್ನು ಪಟ್ಟಿಯಿಂದ ಹೊರಗಿಡಲಾಗಿದೆ ಎಂದು ಆರೋಪಿಸಿ ನಟ ಪ್ರಕಾಶ್ ರಾಜ್ ಕೇಂದ್ರ ಚುನಾವಣಾ ಆಯೋಗದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬೆಂಗಳೂರಿನ ಪ್ರೆಸ್ ಕ್ಲಬ್‌ನಲ್ಲಿ ನಡೆದ ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ಅವರು, ಈ ಅವೈಜ್ಞಾನಿಕ ಪ್ರಕ್ರಿಯೆಯನ್ನು ಪ್ರತಿಭಟಿಸಿ ಸೆಪ್ಟೆಂಬರ್ 1 ರಂದು ನಗರದ ಸ್ವಾತಂತ್ರ್ಯ ಉದ್ಯಾನದಲ್ಲಿ 'ಎಲೆಕ್ಷನ್ ಕಮಿಷನ್ ಚಲೋ' ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಪ್ರಕಟಿಸಿದರು.
ಈ ಹೋರಾಟವು ರಾಜ್ಯದ ಮುಖ್ಯ ಚುನಾವಣಾಧಿಕಾರಿ ಅಥವಾ ಬಿಎಲ್‌ಒಗಳ ವಿರುದ್ಧ ಅಲ್ಲ, ಪೂರ್ವ ಸಿದ್ಧತೆಯಿಲ್ಲದೆ ತರಾತುರಿಯಲ್ಲಿ SIR ಪ್ರಕ್ರಿಯೆ ನಡೆಸಿದ ಕೇಂದ್ರ ಚುನಾವಣಾ ಆಯೋಗದ ವಿರುದ್ಧವಾಗಿದೆ ಎಂದು ಅವರು ಸ್ಪಷ್ಟಪಡಿಸಿದರು. ಕನಿಷ್ಠ ಆರು ತಿಂಗಳ ಕಾಲಾವಕಾಶ ನೀಡದೆ ಏಕಾಏಕಿ ಮತದಾರರನ್ನು ಪಟ್ಟಿಯಿಂದ ಕೈಬಿಟ್ಟಿರುವುದು ಪ್ರಜಾಪ್ರಭುತ್ವ ವ್ಯವಸ್ಥೆಗೆ ಮಾರಕವಾಗಿದೆ ಎಂದ ಅವರು, ಶಿಕ್ಷಕರಿಗೆ ಸೂಕ್ತ ತರಬೇತಿ ನೀಡದೆ ಬಿಎಲ್‌ಒಗಳನ್ನಾಗಿ ಬಳಸಿ ತರಾತುರಿಯಲ್ಲಿ ಈ ಪ್ರಕ್ರಿಯೆ ನಡೆಸಿರುವುದು ಸರಿಯಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಕರಡು ಪಟ್ಟಿಯಲ್ಲಿ 1.07 ಕೋಟಿ ಮಂದಿಯ ಪೈಕಿ 65 ಲಕ್ಷಕ್ಕೂ ಹೆಚ್ಚು ಮಂದಿ ಸ್ಥಳಾಂತರಗೊಂಡಿದ್ದಾರೆ ಎಂದು ಹೇಳಿರುವುದು ದೋಷಪೂರಿತವಾಗಿದೆ ಎಂದ ಪ್ರಕಾಶ್ ರಾಜ್, ತಮ್ಮ ವಿಳಾಸ ಬದಲಾವಣೆಗೆ ಅರ್ಜಿ ನೀಡಿದರೂ ಬಿಎಲ್‌ಒಗಳು ನಿರಾಕರಿಸಿ ಶಾಶ್ವತ ಸ್ಥಳಾಂತರಿತರ ಪಟ್ಟಿಗೆ ಸೇರಿಸಿದ್ದಾರೆ ಎಂದು ಆರೋಪಿಸಿದರು. ಮತದಾರರ ಹಕ್ಕುಗಳ ರಕ್ಷಣೆಗೆ ರಾಜಕೀಯ ಪಕ್ಷಗಳು ಹಾಗೂ ಸರ್ಕಾರ ಧ್ವನಿಗೂಡಿಸಬೇಕು ಎಂದು ಮನವಿ ಮಾಡಿದ ಅವರು, ಇಡೀ SIR ಪ್ರಕ್ರಿಯೆಯನ್ನು ತಡೆಹಿಡಿಯುವಂತೆ ಒತ್ತಾಯಿಸಿ ಶೀಘ್ರದಲ್ಲೇ ನ್ಯಾಯಾಲಯದ ಬಾಗಿಲು ತಟ್ಟುವುದಾಗಿ ತಿಳಿಸಿದರು.