ಮಂಗಳೂರು : ವಿಧಾನ ಪರಿಷತ್ ಸದಸ್ಯ ಶ್ರೀ ಐವನ್ ಡಿ'ಸೋಜಾ ಅವರು ನಿಯಮ 72ರಡಿಯಲ್ಲಿ ಮಂಡಿಸಿದ ಗಮನ ಸೆಳೆಯುವ ಸೂಚನೆಗೆ ಇಂಧನ ಹಾಗೂ ಪ್ರವಾಸೋದ್ಯಮ ಸಚಿವ ಕೆ.ಜಿ. ಜಾರ್ಜ್ ಅವರು ಸುದೀರ್ಘ ಉತ್ತರ ನೀಡಿದ್ದಾರೆ. ರಾಜ್ಯದ 320 ಕಿಲೋಮೀಟರ್ ಉದ್ದದ ಕರಾವಳಿ ಹಾಗೂ ಮಲೆನಾಡು ಭಾಗಗಳಲ್ಲಿ ಸುಸ್ಥಿರ ಹಾಗೂ ಜವಾಬ್ದಾರಿಯುತ ಪ್ರವಾಸೋದ್ಯಮವನ್ನು ವಿಶ್ವ ದರ್ಜೆಯ ಮಟ್ಟದಲ್ಲಿ ಅಭಿವೃದ್ಧಿಪಡಿಸಲು ಸರ್ಕಾರ "ಕರಾವಳಿ ಮತ್ತು ಮಲೆನಾಡು ಕರ್ನಾಟಕ ಪ್ರವಾಸೋದ್ಯಮ ನೀತಿ 2024-2029" ರಡಿಯಲ್ಲಿ ಬೃಹತ್ ಯೋಜನೆ ರೂಪಿಸಿದೆ.
2026-27ರ ಆಯವ್ಯಯ ಭಾಷಣದ ಕಂಡಿಕೆ-406 ರಂತೆ ಸಮಗ್ರ ಕರಾವಳಿ ಪ್ರವಾಸೋದ್ಯಮ ಅಭಿವೃದ್ಧಿ ಯೋಜನೆಯ ಭಾಗವಾಗಿ ಸೀ ಪ್ಲೇನ್ (Sea Plane), ಹೆಲಿ ಟ್ಯಾಕ್ಸಿ (Heli Taxi), ಜಾಯ್ ರೈಡ್ ಹಾಗೂ ರಿವರ್ ಕ್ರೂಸ್ ಚಟುವಟಿಕೆಗಳನ್ನು ಉತ್ತೇಜಿಸಲು 2026ರ ಮೇ 27 ರಂದು ಸರ್ಕಾರಿ ಆದೇಶದ ಮೂಲಕ ತಾತ್ವಿಕ ಅನುಮೋದನೆ ನೀಡಲಾಗಿದೆ. ಆರ್ಥಿಕ ಇಲಾಖೆಯ ಸೂಚನೆಯಂತೆ ಈ ಯೋಜನೆಗಳನ್ನು ಸಾರ್ವಜನಿಕ ಖಾಸಗಿ ಸಹಭಾಗಿತ್ವ (ಪಿಪಿಪಿ) ಮಾದರಿಯಲ್ಲಿ ಅನುಷ್ಠಾನಗೊಳಿಸಲಾಗುತ್ತಿದೆ.
ಈ ಪ್ರವಾಸೋದ್ಯಮ ನೀತಿಯು ಉತ್ತರ ಕನ್ನಡ, ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳ ಸಂಪೂರ್ಣ ಭಾಗಗಳಿಗೆ ಅನ್ವಯಿಸಲಿದೆ. ಇದರ ಜೊತೆಗೆ ಚಿಕ್ಕಮಗಳೂರು ಜಿಲ್ಲೆಯ ಚಿಕ್ಕಮಗಳೂರು, ಮೂಡಿಗೆರೆ, ಕೊಪ್ಪ, ಶೃಂಗೇರಿ ಹಾಗೂ ಎನ್.ಆರ್.ಪುರ ತಾಲೂಕುಗಳು; ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ, ಸಾಗರ ಮತ್ತು ಹೊಸನಗರ ತಾಲೂಕುಗಳು ಹಾಗೂ ಹಾಸನ ಜಿಲ್ಲೆಯ ಸಕಲೇಶಪುರ ಮತ್ತು ಆಲೂರು ತಾಲೂಕುಗಳನ್ನು ಸಹ ಅಭಿವೃದ್ಧಿಗೆ ಗುರುತಿಸಲಾಗಿದೆ.
2025-26ನೇ ಸಾಲಿನ ಆಯವ್ಯಯ ಘೋಷಣೆಯಂತೆ ಕಡಲತೀರ ಅಭಿವೃದ್ಧಿ ಹಾಗೂ ಹೈವೇ ಹಬ್‌ಗಳನ್ನು ಉನ್ನತೀಕರಿಸಲು ಮೆ|| ಐ.ಪಿ.ಇ ಗ್ಲೋಬಲ್ ಸಂಸ್ಥೆಯನ್ನು ಕಾರ್ಯಕ್ರಮ ನಿರ್ವಹಣಾ ಘಟಕವಾಗಿ (PMU) ಆಯ್ಕೆ ಮಾಡಲಾಗಿದೆ. ಪಿಪಿಪಿ ಮಾದರಿಯ ಅಭಿವೃದ್ಧಿಗಾಗಿ ಉಡುಪಿ ಜಿಲ್ಲೆಯ ತ್ರಾಸಿ ಮರವಂತೆ, ಕೋಡಿ, ಕುಂದಾಪುರ ಕಡಲತೀರ, ಬಾರ್ಕೂರ ಕೋಟೆ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಕೋಡಿಕಲ್ ಮತ್ತು ತಣ್ಣೀರುಬಾವಿ ಕಡಲತೀರ ಸೇರಿದಂತೆ 05 ಪ್ರಮುಖ ತಾಣಗಳಿಗೆ ಮೆ|| ಅರ್ನ್ಸ್ಟ್ & ಯಂಗ್ ಎಲ್‌ಎಲ್‌ಪಿ (E&Y) ಸಂಸ್ಥೆಯನ್ನು ವಹಿವಾಟು ಸಲಹೆಗಾರರನ್ನಾಗಿ (Transaction Advisor) ನೇಮಿಸಲಾಗಿದೆ.