image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ರಾಜ್ಯ

ಸೆಪ್ಟೆಂಬರ್ 8ರ 'ತೆನೆ ಹಬ್ಬ'ಕ್ಕೆ ಸರ್ಕಾರಿ ರಜೆ ಘೋಷಿಸಲು ಇವನ್ ಡಿ'ಸೋಜಾ ಆಗ್ರಹ

ಸೆಪ್ಟೆಂಬರ್ 8ರ 'ತೆನೆ ಹಬ್ಬ'ಕ್ಕೆ ಸರ್ಕಾರಿ ರಜೆ ಘೋಷಿಸಲು ಇವನ್ ಡಿ'ಸೋಜಾ ಆಗ್ರಹ

ಬೆಂಗಳೂರು: ಕರಾವಳಿ ಭಾಗದಲ್ಲಿ ಕ್ರೈಸ್ತ ಸಮುದಾಯದವರು ಶ್ರದ್ಧಾ-ಭಕ್ತಿಯಿಂದ ಆಚರಿಸುವ ದೇವಮಾತೆ ಕನ್ಯಾಮರಿಯಮ್ಮನವರ ಜನ್ಮದಿನ ಹಾಗೂ 'ತೆನೆ ಹಬ್ಬ' (ಕೊರಳ್ ಹಬ್ಬ) ಸಂದರ್ಭವಾದ ಸೆಪ್ಟೆಂಬರ್ 8ರಂದು ಸರ್ಕಾರಿ ರಜೆ ಘೋಷಿಸುವಂತೆ ವಿಧಾನ ಪರಿಷತ್ ಶಾಸಕ ಇವನ್ ಡಿ'ಸೋಜಾ ಸರ್ಕಾರವನ್ನು ಒತ್ತಾಯಿಸಿದ್ದಾರೆ. ಈ ವಿಷಯವನ್ನು ವಿಧಾನ ಪರಿಷತ್ತಿನ ಶೂನ್ಯ ವೇಳೆಯಲ್ಲಿ ಪ್ರಸ್ತಾಪಿಸಿ ಮುಖ್ಯಮಂತ್ರಿಗಳ ಗಮನ ಸೆಳೆಯಲು ಬಯಸಿ ಅವರು ಸಭಾಪತಿಗಳಿಗೆ ಪತ್ರ ಬರೆದಿದ್ದಾರೆ.

ಕರಾವಳಿ ಭಾಗದ ದಕ್ಷಿಣ ಕನ್ನಡ, ಉಡುಪಿ ಹಾಗೂ ಉತ್ತರ ಕನ್ನಡ ಜಿಲ್ಲೆಗಳಲ್ಲಿ ಕ್ರೈಸ್ತ ಬಾಂಧವರು ಶಿಕ್ಷಣ, ಆರೋಗ್ಯ ಮತ್ತು ಕೃಷಿ ಕ್ಷೇತ್ರದಲ್ಲಿ ಸಕ್ರಿಯರಾಗಿದ್ದು, ರೈತರು ತಾವು ಬೆಳೆದ ಹೊಸ ಫಸಲನ್ನು ದೇವರಿಗೆ ಅರ್ಪಿಸಿ ಕುಟುಂಬದವರೊಂದಿಗೆ 'ಕುಟುಂಬದ ಹಬ್ಬ'ವಾಗಿ ಇದನ್ನು ಸಂಭ್ರಮಿಸುತ್ತಾರೆ. ಪ್ರಸ್ತುತ ಈ ದಿನಕ್ಕೆ ಶಿಕ್ಷಕರಿಗೆ ಮಾತ್ರ ಪರಿಮಿತ ರಜೆ (R.H.) ಲಭ್ಯವಿದ್ದು, ಕರಾವಳಿಯಲ್ಲಿ ಇದು ನಾಡಹಬ್ಬದ ರೀತಿಯಲ್ಲೇ ಆಚರಿಸಲ್ಪಡುತ್ತದೆ. 8 ದಿನಗಳ ಕಾಲ "ನೋವಿನಾ ವಿಶೇಷ ಪೂಜೆ" ನಡೆಸಿ, ಹೂವು ಹಾಗೂ ಕಬ್ಬು ವಿತರಿಸುವುದು ಈ ಹಬ್ಬದ ಪ್ರಮುಖ ವೈಶಿಷ್ಟ್ಯವಾಗಿದೆ.

ಮಂಗಳೂರು, ಶಿವಮೊಗ್ಗ ಮತ್ತು ಚಿಕ್ಕಮಗಳೂರು ಧರ್ಮಪ್ರಾಂತ್ಯಗಳಲ್ಲಿ ಈ ಆಚರಣೆ ವೈಭವದಿಂದ ನಡೆಯುವುದರಿಂದ, ಕ್ಯಾಥೋಲಿಕ್ ಸಭಾ ಸೇರಿದಂತೆ ಹಲವು ಸಂಘಟನೆಗಳು ರಾಜ್ಯಾದ್ಯಂತ ರಜೆ ನೀಡುವಂತೆ ಮುಖ್ಯಮಂತ್ರಿಗಳಿಗೆ ಈಗಾಗಲೇ ಮನವಿ ಮಾಡಿವೆ. ರಾಜ್ಯಾದ್ಯಂತ ಸಾರ್ವತ್ರಿಕ ರಜೆ ನೀಡಲು ಸಾಧ್ಯವಾಗದಿದ್ದಲ್ಲಿ, ಕನಿಷ್ಠ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ಮಟ್ಟಿಗಾದರೂ ಸೆಪ್ಟೆಂಬರ್ 8ರಂದು ಸಾರ್ವತ್ರಿಕ ರಜೆ ಘೋಷಿಸಬೇಕೆಂದು ಶಾಸಕರು ಶೂನ್ಯ ವೇಳೆಯ ಮೂಲಕ ಪಟ್ಟು ಹಿಡಿದಿದ್ದಾರೆ.

Category
ಕರಾವಳಿ ತರಂಗಿಣಿ