ಶಿವಮೊಗ್ಗ: ಶಿವಮೊಗ್ಗ ಜಿಲ್ಲೆಯಲ್ಲಿ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳನ್ನು ಕಟ್ಟಕಡೆಯ ವ್ಯಕ್ತಿಗೂ ಸಮರ್ಪಕವಾಗಿ ತಲುಪಿಸುವ ಉದ್ದೇಶದಿಂದ ಗ್ರಾಮ ಪಂಚಾಯಿತಿ ಹಾಗೂ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಒಟ್ಟು 501 ಗ್ಯಾರಂಟಿ ಸಮಿತಿಗಳನ್ನು ರಚಿಸಲಾಗುತ್ತಿದ್ದು, 3,006ಕ್ಕೂ ಹೆಚ್ಚು ಸದಸ್ಯರನ್ನು ನೇಮಕ ಮಾಡಲಾಗುತ್ತಿದೆ ಎಂದು ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಸಿ.ಎಸ್. ಚಂದ್ರಭೂಪಾಲ ತಿಳಿಸಿದ್ದಾರೆ.
ಸೋಮವಾರ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಅವರ ಸೂಚನೆಯಂತೆ 273 ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಈ ಸಮಿತಿಗಳು ರೂಪುಗೊಳ್ಳುತ್ತಿವೆ ಎಂದರು. ಪ್ರತಿ ಸಮಿತಿಯು 6 ಸದಸ್ಯರನ್ನು ಒಳಗೊಂಡಿರಲಿದ್ದು, ಪರಿಶಿಷ್ಟ ಜಾತಿ/ಪಂಗಡ (1), ಹಿಂದುಳಿದ ವರ್ಗ (1), ಅಲ್ಪಸಂಖ್ಯಾತರು (1) ಹಾಗೂ ಸಾಮಾನ್ಯ ವರ್ಗದ ಮಹಿಳೆಯರಿಗೆ (2) ಮೀಸಲಾತಿ ನೀಡಲಾಗುತ್ತದೆ. ಫಲಾನುಭವಿಗಳ ಮನೆ-ಮನೆಗೆ ಭೇಟಿ ನೀಡಿ ಜಾಗೃತಿ ಮೂಡಿಸುವುದು, ತಾಂತ್ರಿಕ ಸಮಸ್ಯೆಗಳನ್ನು ಸ್ಥಳೀಯವಾಗಿಯೇ ಬಗೆಹರಿಸುವುದು ಮತ್ತು ಅರ್ಹರಿಗೆ ಯೋಜನೆ ತಲುಪಿಸುವುದು ಈ ಸಮಿತಿಗಳ ಮುಖ್ಯ ಕರ್ತವ್ಯವಾಗಿದೆ. ಮುಂದಿನ 15 ದಿನಗಳ ಒಳಗೆ ಸಮಿತಿಗಳ ರಚನೆ ಪೂರ್ಣಗೊಳಿಸುವಂತೆ ತಾಲ್ಲೂಕು ಅಧ್ಯಕ್ಷರಿಗೆ ಸೂಚಿಸಲಾಗಿದೆ.
ಸಭೆಯಲ್ಲಿ ವಿವಿಧ ಗ್ಯಾರಂಟಿ ಯೋಜನೆಗಳ ಪ್ರಗತಿ ಪರಿಶೀಲನೆ ನಡೆಸಲಾಯಿತು. ಶಕ್ತಿ ಯೋಜನೆಯಡಿ ಜಿಲ್ಲೆಯಲ್ಲಿ ಶೇ. 65.30ರಷ್ಟು ಮಹಿಳೆಯರು ಪ್ರಯಾಣ ಸೌಲಭ್ಯ ಪಡೆದಿದ್ದು, ಹೆಚ್ಚುವರಿಯಾಗಿ 50 ಬಸ್ ಹಾಗೂ 150 ಸಿಬ್ಬಂದಿ ಒದಗಿಸುವಂತೆ ಸರ್ಕಾರಕ್ಕೆ ಮನವಿ ಮಾಡಲಾಗಿದೆ. ಹೊಸನಗರದಲ್ಲಿ ಕೆಎಸ್‌ಆರ್‌ಟಿಸಿ ಡಿಪೋ ನಿರ್ಮಾಣಕ್ಕೆ 4 ಎಕರೆ ಜಾಗ ಗುರುತಿಸಲಾಗಿದ್ದು, ಕಾಮಗಾರಿ ಶೀಘ್ರ ಆರಂಭಿಸುವಂತೆ ಕೋರಲಾಯಿತು. ಗೃಹಜ್ಯೋತಿ ಯೋಜನೆಯಡಿ 4.80 ಲಕ್ಷಕ್ಕೂ ಹೆಚ್ಚು ಫಲಾನುಭವಿಗಳು ಸೌಲಭ್ಯ ಪಡೆಯುತ್ತಿದ್ದು, ಗೃಹಲಕ್ಷ್ಮಿ ಯೋಜನೆಗೆ ಸಂಬಂಧಿಸಿದಂತೆ ಮರಣ ಹೊಂದಿದ ಫಲಾನುಭವಿಗಳ ವಿವರ ಪಡೆದು ಹಣ ವರ್ಗಾವಣೆ ತಡೆಯಲು ಕ್ರಮ ವಹಿಸಲು ಸೂಚಿಸಲಾಯಿತು. ಸಭೆಯಲ್ಲಿ ಪ್ರಾಧಿಕಾರದ ಉಪಾಧ್ಯಕ್ಷರಾದ ಮಲ್ಲಿಕಾರ್ಜುನಪ್ಪ, ಆರ್. ಶಿವಣ್ಣ, ಎಂ.ಎಸ್. ಬಸವರಾಜಪ್ಪ, ಇಕ್ಕೇರಿ ರಮೇಶ್ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.