image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ರಾಜ್ಯ

2027ರ ಮಾರ್ಚ್‌ ವೇಳೆಗೆ ನಮ್ಮ ಮೆಟ್ರೋ ಪಿಂಕ್ ಲೈನ್ ಪೂರ್ಣ ಸಿದ್ಧ: ಸಚಿವ ಕೃಷ್ಣ ಬೈರೇಗೌಡ

2027ರ ಮಾರ್ಚ್‌ ವೇಳೆಗೆ ನಮ್ಮ ಮೆಟ್ರೋ ಪಿಂಕ್ ಲೈನ್ ಪೂರ್ಣ ಸಿದ್ಧ: ಸಚಿವ ಕೃಷ್ಣ ಬೈರೇಗೌಡ

ಬೆಂಗಳೂರು: ನಮ್ಮ ಮೆಟ್ರೋ ಯೋಜನೆಯ ಬಹುನಿರೀಕ್ಷಿತ ಪಿಂಕ್ ಲೈನ್ ಮಾರ್ಗವು 2027ರ ಮಾರ್ಚ್ ವೇಳೆಗೆ ಸಂಪೂರ್ಣವಾಗಿ ಸಾರ್ವಜನಿಕರ ಸೇವೆಗೆ ಲಭ್ಯವಾಗಲಿದೆ. ಎಂಜಿ ರಸ್ತೆಯಿಂದ ಶಿವಾಜಿನಗರಕ್ಕೆ ತೆರಳುವ ಸುರಂಗ ಮಾರ್ಗದ ಕಾಮಗಾರಿಯನ್ನು ಬೆಂಗಳೂರು ಅಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ, ಸಚಿವ ರಿಜ್ವಾನ್ ಅರ್ಷದ್ ಹಾಗೂ ಸಂಸದ ಪಿಸಿ ಮೋಹನ್ ಶನಿವಾರ ವೀಕ್ಷಿಸಿ ಅಧಿಕಾರಿಗಳಿಂದ ಪ್ರಗತಿಯ ಮಾಹಿತಿ ಪಡೆದುಕೊಂಡರು. ಎಂಜಿ ರಸ್ತೆಯಿಂದ ಶಿವಾಜಿನಗರ ಮೆಟ್ರೋ ನಿಲ್ದಾಣದವರೆಗೆ ನಡೆದುಕೊಂಡು ಸಾಗಿದ ಜನಪ್ರತಿನಿಧಿಗಳು ಸ್ಥಳದಲ್ಲೇ ಕಾಮಗಾರಿಯ ಸ್ಥಿತಿಗತಿಯನ್ನು ಪರಿಶೀಲಿಸಿದರು.

ಒಟ್ಟು 21 ಕಿಲೋಮೀಟರ್ ಉದ್ದದ ಈ ಪಿಂಕ್ ಲೈನ್ ಮಾರ್ಗವು ಎಲಿವೇಟೆಡ್ ಹಾಗೂ ಸುರಂಗ (ಅಂಡರ್ ಗ್ರೌಂಡ್) ಎಂಬ ಎರಡು ಭಾಗಗಳನ್ನು ಒಳಗೊಂಡಿದೆ. ತಾವರೆಕೆರೆಯಿಂದ ಕಾಳೇನ ಅಗ್ರಹಾರವರೆಗಿನ 7.5 ಕಿಲೋಮೀಟರ್ ಉದ್ದದ ಎಲಿವೇಟೆಡ್ ಮಾರ್ಗ ಈಗಾಗಲೇ ಸಂಪೂರ್ಣ ಸಿದ್ಧಗೊಂಡಿದೆ. ರೈಲ್ವೆ ಇಲಾಖೆಯಿಂದ ಬರಬೇಕಿರುವ ಅಂತಿಮ ಪ್ರಮಾಣಪತ್ರವು ಮುಂದಿನ ವಾರ ಅಥವಾ ಹತ್ತು ದಿನಗಳಲ್ಲಿ ದೊರೆಯಲಿದ್ದು, ಆಗಸ್ಟ್ ಅಥವಾ ಸೆಪ್ಟೆಂಬರ್ ವೇಳೆಗೆ ಈ ಎಲಿವೇಟೆಡ್ ಮಾರ್ಗವನ್ನು ಲೋಕಾರ್ಪಣೆ ಮಾಡಲು ಸಿದ್ಧತೆ ನಡೆಸಲಾಗಿದೆ. ಮುಖ್ಯಮಂತ್ರಿಗಳು ಹಾಗೂ ಕೇಂದ್ರ ಸರ್ಕಾರದ ಪ್ರತಿನಿಧಿಗಳ ಸಮಯ ನಿಗದಿಯಾದ ಬಳಿಕ ಉದ್ಘಾಟನೆಯ ಅಧಿಕೃತ ದಿನಾಂಕ ಪ್ರಕಟವಾಗಲಿದೆ.

ಸುರಂಗ ಮಾರ್ಗದ ಕೆಲಸಗಳು ಇನ್ನೂ ಬಾಕಿ ಇರುವುದರಿಂದ ಇಡೀ ಮಾರ್ಗದ ಸಂಚಾರವನ್ನು ತಡೆಹಿಡಿಯದೆ, ಮೊದಲು ಸಿದ್ಧವಾಗಿರುವ ಎಲಿವೇಟೆಡ್ ಭಾಗವನ್ನು ಸಾರ್ವಜನಿಕರ ಬಳಕೆಗೆ ಮುಕ್ತಗೊಳಿಸಲಾಗುತ್ತಿದೆ. ಜಯದೇವ ನಿಲ್ದಾಣದ ಬಳಿ ಎಂಜಿನ್ ಇಳಿಸಿ ಶೀಘ್ರದಲ್ಲೇ ಟ್ರಯಲ್ ರನ್ ಆರಂಭಿಸುವಂತೆ ಸಚಿವರು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಈ ಸಂಪೂರ್ಣ ಮಾರ್ಗವು ಬನ್ನೇರುಘಟ್ಟ ರಸ್ತೆಯಿಂದ ಜಯದೇವ ಹಾಗೂ ಎಂಜಿ ರಸ್ತೆ ಮೂಲಕ ನಾಗವಾರಕ್ಕೆ ಸಂಪರ್ಕ ಕಲ್ಪಿಸಲಿದ್ದು, ನಗರದ ಹೃದಯಭಾಗದ ಮೂಲಕ ಹಾದುಹೋಗಲಿದೆ. ನಾಗವಾರದಲ್ಲಿ ರೈಲು ಬದಲಾಯಿಸುವ ಮೂಲಕ ಹೆಬ್ಬಾಳ ಮಾರ್ಗವಾಗಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೂ ತಲುಪಬಹುದಾಗಿದೆ.

ಸುಮಾರು 12,000 ಕೋಟಿ ರೂಪಾಯಿ ವೆಚ್ಚದ ಈ ಯೋಜನೆಗೆ ರಾಜ್ಯ ಸರ್ಕಾರವು ತನ್ನ ಪಾಲಿನ ಸಂಪೂರ್ಣ ಅನುದಾನವನ್ನು ಒದಗಿಸಿದೆ. ಕೋವಿಡ್ ಕಾರಣದಿಂದ ಕಾಮಗಾರಿ ಸುಮಾರು ಒಂದೂವರೆ ವರ್ಷ ವಿಳಂಬವಾಗಿದ್ದರೂ, ಪ್ರಸ್ತುತ ಅಧಿಕಾರಿಗಳು ಸವಾಲುಗಳ ನಡುವೆಯೂ ಶ್ರಮಿಸಿ ಕೆಲಸ ನಿರ್ವಹಿಸುತ್ತಿದ್ದಾರೆ. ಮುಂದಿನ ವರ್ಷದ ಮಾರ್ಚ್ ವೇಳೆಗೆ ಸುರಂಗ ಮಾರ್ಗದ ಕೆಲಸಗಳು ಮುಕ್ತಾಯಗೊಂಡು ಇಡೀ ಪಿಂಕ್ ಲೈನ್ ಮಾರ್ಗವು ಜನರ ಸೇವೆಗೆ ಮುಕ್ತವಾಗಲಿದೆ.

Category
ಕರಾವಳಿ ತರಂಗಿಣಿ