ಬೆಂಗಳೂರು : ಬೆಂಗಳೂರು-ಮೈಸೂರು ಇನ್‌ಫ್ರಾಸ್ಟ್ರಕ್ಚರ್ ಕಾರಿಡಾರ್ (BMICP) ಯೋಜನೆಗಾಗಿ ಸ್ವಾಧೀನಪಡಿಸಿಕೊಂಡ ಭೂಮಿಗೆ ಎರಡು ದಶಕಗಳಿಗೂ ಹೆಚ್ಚು ಕಾಲ ಪರಿಹಾರ ನಿಗದಿಪಡಿಸದ ಹಿನ್ನೆಲೆಯಲ್ಲಿ ಭೂಸ್ವಾಧೀನ ಪ್ರಕ್ರಿಯೆಯನ್ನು ರದ್ದುಗೊಳಿಸಿದ್ದ ಏಕಸದಸ್ಯ ಪೀಠದ ಆದೇಶವನ್ನು ಕರ್ನಾಟಕ ಹೈಕೋರ್ಟ್‌ನ ವಿಭಾಗೀಯ ಪೀಠ ಎತ್ತಿಹಿಡಿದಿದೆ. ನೈಸ್ (NICE) ಕಂಪನಿ ಹಾಗೂ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ (KIADB) ಸಲ್ಲಿಸಿದ್ದ ಮೇಲ್ಮನವಿ ಅರ್ಜಿಗಳ ಬ್ಯಾಚ್ ಅನ್ನು ನ್ಯಾಯಮೂರ್ತಿ ಡಿ.ಕೆ. ಸಿಂಗ್ ಮತ್ತು ನ್ಯಾಯಮೂರ್ತಿ ಟಿ.ಎಂ. ನಡಾಫ್ ಅವರಿದ್ದ ವಿಭಾಗೀಯ ಪೀಠ ಸಂಪೂರ್ಣವಾಗಿ ವಜಾಗೊಳಿಸಿದೆ.
ತೀರ್ಪು ಪ್ರಕಟಿಸುವ ವೇಳೆ ನೈಸ್ ಸಂಸ್ಥೆಯ ಕಾರ್ಯವೈಖರಿಯ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ನ್ಯಾಯಪೀಠ, ನೈಸ್ ಯೋಜನೆಯಲ್ಲಿ ‘ನೈಸ್’ (ಉತ್ತಮ) ಎನ್ನುವಂಥದ್ದು ಏನೂ ಇಲ್ಲ ಎಂದು ತೀಕ್ಷ್ಣವಾಗಿ ಹೇಳಿದೆ. ಸಂವಿಧಾನದ 300A ವಿಧಿಯಡಿ ಕಡ್ಡಾಯವಾಗಿರುವ ಪರಿಹಾರವನ್ನು ನೀಡದೆ ರೈತರ ಭೂಮಿ ಹಾಗೂ ಅವರ ತಲೆಮಾರುಗಳ ಜೀವನೋಪಾಯವನ್ನು ಕಸಿದುಕೊಳ್ಳಲಾಗಿದೆ ಎಂದು ಕೋರ್ಟ್ ಕಟುವಾಗಿ ಆಕ್ಷೇಪಿಸಿದೆ. ಮೂಲ ಯೋಜನೆಯಂತೆ 111 ಕಿ.ಮೀ ಎಕ್ಸ್‌ಪ್ರೆಸ್‌ವೇ ಪೈಕಿ ಕಳೆದ 25-26 ವರ್ಷಗಳಲ್ಲಿ ಕೇವಲ 5 ಕಿ.ಮೀ ಎಕ್ಸ್‌ಪ್ರೆಸ್‌ವೇ ಮಾತ್ರ ನಿರ್ಮಾಣ ಮಾಡಲಾಗಿದೆ ಎಂದು ಲೋಕೋಪಯೋಗಿ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಸಲ್ಲಿಸಿದ ಅಫಿಡವಿಟ್ ಅನ್ನು ಉಲ್ಲೇಖಿಸಿದ ಪೀಠ, ಈ ಯೋಜನೆಯು ರಾಜ್ಯದ ಅತಿ ದೊಡ್ಡ ಹಗರಣಗಳಲ್ಲಿ ಒಂದಾಗಿ ಕಾಣಿಸುತ್ತಿದೆ ಎಂದು ಅಭಿಪ್ರಾಯಪಟ್ಟಿದೆ.
ಸಾರ್ವಜನಿಕ ಹಿತಾಸಕ್ತಿಯನ್ನು ಕಾಪಾಡುವ ಬದಲು ಈ ಯೋಜನೆಯು ಕೇವಲ ಪ್ರವರ್ತಕರಿಗೆ ಮಾತ್ರ ಅತಿಯಾದ ಲಾಭ ಮಾಡಿಕೊಟ್ಟಿದೆ ಎಂದಿರುವ ಪೀಠ, ಒಡಂಬಡಿಕೆ ಒಪ್ಪಂದದ (FWA) ನಿಯಮಗಳನ್ನು ಗಾಳಿಗೆ ತೂರಿ ಭೂಮಿಯನ್ನು ಖಾಸಗಿ ಡೆವಲಪರ್‌ಗಳೊಂದಿಗೆ ವಾಣಿಜ್ಯ ಬಳಕೆಗೆ ನೀಡಿರುವುದು, ಸರ್ಕಾರಕ್ಕೆ ಕೆರೆ-ಕಟ್ಟೆಗಳ ಜಾಗವನ್ನು ಹಸ್ತಾಂತರಿಸಿ ಪರಿಸರಕ್ಕೆ ಹಾನಿ ಮಾಡಿರುವುದು ಮತ್ತು ಸರ್ಕಾರದ ಪೂರ್ವಾನುಮತಿ ಇಲ್ಲದೆ ಟೋಲ್ ದರ ಹೆಚ್ಚಳ ಮಾಡಿರುವುದನ್ನು ಬಲವಾಗಿ ಆಕ್ಷೇಪಿಸಿದೆ. ಯೋಜನೆಯ ಹಣಕಾಸು ಹಾಗೂ ಅವ್ಯವಹಾರಗಳ ಕುರಿತು ತಜ್ಞರ ವಿಶೇಷ ತಂಡದಿಂದ ವಿಧಿವಿಜ್ಞಾನ ಲೆಕ್ಕಪರಿಶೋಧನೆ (ಫೊರೆನ್ಸಿಕ್ ಆಡಿಟ್) ಮತ್ತು ಸ್ವತಂತ್ರ ತನಿಖೆ ನಡೆಸಲು ಇದು ಸಕಾಲಿಕ ಪ್ರಕರಣವಾಗಿದೆ ಎಂದು ಕೋರ್ಟ್ ಹೇಳಿದೆ.
1998 ರಿಂದ 2009 ರ ನಡುವೆ ಸ್ವಾಧೀನ ಅಧಿಸೂಚನೆಗಳನ್ನು ಹೊರಡಿಸಿದ್ದರೂ, 20 ವರ್ಷಗಳಿಗೂ ಹೆಚ್ಚು ಕಾಲ ರೈತರಿಗೆ ಯಾವುದೇ ಪರಿಹಾರದ ಅವಾರ್ಡ್ ಪಾಸ್ ಮಾಡದೆ ಅವರ ಆಸ್ತಿಯ ಮೇಲಿನ ಹಕ್ಕನ್ನು ಅತಂತ್ರ ಸ್ಥಿತಿಯಲ್ಲಿ ಇಟ್ಟಿರುವುದು ಸಂವಿಧಾನಬಾಹಿರ ಹಾಗೂ ಅನಿಯಂತ್ರಿತ ನಡವಳಿಕೆಯಾಗಿದೆ ಎಂದು ನ್ಯಾಯಪೀಠ ತೀರ್ಮಾನಿಸಿದೆ. ಭೂಮಿ ಸರ್ಕಾರದ ವಶಕ್ಕೆ ಬಂದಿದೆ ಎಂಬ ಕಾರಣವನ್ನಿಟ್ಟುಕೊಂಡು ಅನಿರ್ದಿಷ್ಟಾವಧಿಯವರೆಗೆ ಪರಿಹಾರ ವಿಳಂಬ ಮಾಡುವುದನ್ನು ಸಮರ್ಥಿಸಿಕೊಳ್ಳಲಾಗದು ಎಂದಿರುವ ವಿಭಾಗೀಯ ಪೀಠ, ಏಕಸದಸ್ಯ ಪೀಠವು ಭೂಸ್ವಾಧೀನ ರದ್ದುಗೊಳಿಸಿ ನೀಡಿದ್ದ ಆದೇಶ ಸಂಪೂರ್ಣ ಸರಿ ಎಂದು ಸ್ಪಷ್ಟಪಡಿಸಿದೆ.