ಹುಬ್ಬಳ್ಳಿ: ರಾಜ್ಯ ಕಾಂಗ್ರೆಸ್ ಸರ್ಕಾರದ ತುಷ್ಟೀಕರಣದ ರಾಜಕೀಯದಿಂದಾಗಿ ಹುಬ್ಬಳ್ಳಿಯ ಐತಿಹಾಸಿಕ ಭವಾನಿ ಶಂಕರ ದೇವಸ್ಥಾನದ ಪುಷ್ಕರಣಿ ಮೇಲೆ ಅಕ್ರಮವಾಗಿ ರಸ್ತೆ ನಿರ್ಮಿಸಲಾಗಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹಳೇ ಹುಬ್ಬಳ್ಳಿಯ ಅಸಾರ್ ಓಣಿಯಲ್ಲಿರುವ ಸುಮಾರು 1,400 ವರ್ಷಗಳ ಪುರಾತನ ಭವಾನಿ ಶಂಕರ ದೇವಾಲಯ ಮತ್ತು ಪುಷ್ಕರಣಿ ಜಾಗಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಕಾಮಗಾರಿಯನ್ನು ತಕ್ಷಣ ಸ್ಥಗಿತಗೊಳಿಸುವಂತೆ ಸ್ಥಳೀಯರು ಮನವಿ ಸಲ್ಲಿಸಿದ್ದರೂ, ಅಧಿಕಾರಿಗಳು ಮತಾಂಧ ಶಕ್ತಿಗಳ ಒತ್ತಡಕ್ಕೆ ಮಣಿದು ನಿಯಮಬಾಹಿರವಾಗಿ ರಸ್ತೆ ನಿರ್ಮಿಸಿದ್ದಾರೆ ಎಂದು ಆರೋಪಿಸಿದರು. ಪುರಾತತ್ವ ಇಲಾಖೆಯ ವ್ಯಾಪ್ತಿಗೆ ಒಳಪಡುವ ಈ ದೇವಾಲಯದ 100 ಮೀಟರ್ ಸುಸಂರಕ್ಷಿತ ವ್ಯಾಪ್ತಿಯಲ್ಲಿ ಯಾವುದೇ ಕಾಮಗಾರಿ ಮಾಡುವಂತಿಲ್ಲ ಎಂಬ ನಿಯಮವಿದ್ದರೂ ಅದನ್ನು ಸಂಪೂರ್ಣವಾಗಿ ಉಲ್ಲಂಘಿಸಲಾಗಿದೆ. ಅಲ್ಲದೆ, ಈ ರಸ್ತೆ ಕಾಮಗಾರಿಯ ಕುರಿತು ಮಹಾನಗರ ಪಾಲಿಕೆಯಲ್ಲಿ ಯಾವುದೇ ಅಧಿಕೃತ ಠರಾವು ಪಾಸಾಗಿಲ್ಲ ಎಂದು ಟಿವಿ9 ಕನ್ನಡ ನಿಯೋಗಕ್ಕೆ ನೀಡಿದ ಮಾಹಿತಿಯಲ್ಲಿ ಸಚಿವರು ಸ್ಪಷ್ಟಪಡಿಸಿದರು.
ತಾವು ಬಾಲ್ಯವನ್ನು ಕಳೆದ ಈ ಭಾಗದ ದೇವಸ್ಥಾನದ ಮೇಲೆ ನಿರಂತರ ದಾಳಿಗಳು ನಡೆಯುತ್ತಲೇ ಬಂದಿದ್ದು, ಈ ಹಿಂದೆ ಗಣಪತಿ ಮೂರ್ತಿಯನ್ನೂ ಒಡೆದುಹಾಕಲಾಗಿತ್ತು ಎಂದು ಸ್ಮರಿಸಿದರು. 15-20 ವರ್ಷಗಳ ಹಿಂದೆ ಇದ್ದ ಪುಷ್ಕರಣಿಯನ್ನು ಉತ್ಖನನ ಮಾಡಿ ಸಂರಕ್ಷಿಸಲು ಸರ್ಕಾರಕ್ಕೆ ಮನವಿ ಸಲ್ಲಿಸಲಾಗುವುದು ಎಂದ ಅವರು, ಧಾರವಾಡದಲ್ಲಿ ವಿದ್ಯಾರ್ಥಿಗಳ ಪ್ರತಿಭಟನೆ ಹಾಗೂ ಇಲ್ಲಿ ಪುಷ್ಕರಣಿ ರಕ್ಷಣೆಯ ಹೋರಾಟವನ್ನು ಹತೋಟಿಯಲ್ಲಿಡಲು ಯತ್ನಿಸುತ್ತಿರುವ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. ಕಿಸೆಯಲ್ಲಿ ಸಂವಿಧಾನದ ಪ್ರತಿ ಇಟ್ಟುಕೊಂಡು ತಿರುಗುವ ಕಾಂಗ್ರೆಸ್ ನಾಯಕರು ಪ್ರಜಾಪ್ರಭುತ್ವದ ಹೋರಾಟದ ಹಕ್ಕನ್ನು ಹಸಿಬಿಸಿ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು. ಸರ್ಕಾರ ಒಂದೇ ವರ್ಗದ ಪರವಾಗಿ ನಿಂತು ಬೆಂಬಲ ನೀಡುತ್ತಿರುವುದರಿಂದ ಸ್ಥಳೀಯ ಪಾಲಿಕೆ ಸದಸ್ಯರು ದಾದಾಗಿರಿ ಮಾಡುತ್ತಿದ್ದಾರೆ ಎಂದು ಆರೋಪಿಸಿದ ಸಚಿವರು, ಈ ಅನ್ಯಾಯದ ವಿರುದ್ಧ ಬಿಜೆಪಿ ಹಾಗೂ ಹಿಂದುಪರ ಸಂಘಟನೆಗಳ ಜೊತೆಗೂಡಿ ಕಾನೂನುತ್ಮಕ ಹೋರಾಟ ಮುಂದುವರಿಸಲಾಗುವುದು ಮತ್ತು ತಪ್ಪಿತಸ್ಥ ಅಧಿಕಾರಿಗಳಿಗೆ ತಕ್ಕ ಶಾಸ್ತಿ ಮಾಡಿಸಲಾಗುವುದು ಎಂದು ಎಚ್ಚರಿಸಿದರು.