ಬೆಂಗಳೂರು : ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಸಚಿವ ಬಿ. ನಾಗೇಂದ್ರ ಅವರನ್ನು ಸಂಪುಟದಿಂದ ವಜಾಗೊಳಿಸಬೇಕು ಎಂದು ಪ್ರತಿಪಕ್ಷ ಬಿಜೆಪಿ ತೀವ್ರ ಹೋರಾಟ ನಡೆಸುತ್ತಿರುವ ಬೆನ್ನಲ್ಲೇ, ಅಬಕಾರಿ ಸಚಿವ ಶಿವಲಿಂಗೇಗೌಡ ನೀಡಿರುವ ಹೇಳಿಕೆಯೊಂದು ರಾಜ್ಯ ರಾಜಕೀಯದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ. ಸದನದಲ್ಲಿ ಬಿಜೆಪಿ ಸದಸ್ಯರು ಪ್ರತಿಭಟನೆ ನಡೆಸಿ ಕಲಾಪಕ್ಕೆ ಅಡ್ಡಿಪಡಿಸುತ್ತಿದ್ದಾರೆ ಎಂದು ಆರೋಪಿಸಿ ಕಾಂಗ್ರೆಸ್ ನಾಯಕರು ವಿಧಾನಸೌಧದ ಗಾಂಧಿ ಪ್ರತಿಮೆ ಎದುರು ಪ್ರತಿಭಟನೆ ನಡೆಸಿದ್ದರು. ಈ ಸಂದರ್ಭದಲ್ಲಿ ಖಾಸಗಿ ದೃಶ್ಯ ಮಾಧ್ಯಮದ ಪ್ರತಿನಿಧಿಯೊಬ್ಬರು ಸಿದ್ದರಾಮಯ್ಯ ಅವರ ಅವಧಿಯಲ್ಲಿ ಸಚಿವ ನಾಗೇಂದ್ರ ಅವರಿಂದ ರಾಜೀನಾಮೆ ಏಕೆ ಪಡೆಯಲಾಯಿತು ಎಂದು ಶಿವಲಿಂಗೇಗೌಡರನ್ನು ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಸಚಿವರು, ನಾಗೇಂದ್ರ ವಿರುದ್ಧ ಆರೋಪಗಳು ಕೇಳಿಬಂದಾಗ ಸದನದಲ್ಲಿ ಚರ್ಚೆಯಾಗಿತ್ತು, ಆದರೆ ಆಗ ಆರೋಪಗಳ ಸತ್ಯಾಸತ್ಯತೆ ಸಂಪೂರ್ಣವಾಗಿ ತಿಳಿದಿರಲಿಲ್ಲ ಎಂದು ಹೇಳಿದರು.
ಸತ್ಯಾಸತ್ಯತೆ ತಿಳಿಯದೇ ನಾಗೇಂದ್ರ ಅವರಿಂದ ರಾಜೀನಾಮೆ ಪಡೆದು ಅವರನ್ನು ಬಲಿಪಶು ಮಾಡಲಾಯಿತೇ ಎಂಬ ಮಾಧ್ಯಮ ಪ್ರತಿನಿಧಿಯ ಮರುಪ್ರಶ್ನೆಗೆ ಪ್ರತಿಕ್ರಿಯಿಸಿದ ಶಿವಲಿಂಗೇಗೌಡ, ನಾಗೇಂದ್ರ ಅವರ ವಿರುದ್ಧ ಮೇಲ್ನೋಟಕ್ಕೆ ಅಪರಾಧಿ ಎಂಬ ಶಂಕೆ ಇದ್ದಿದ್ದರಿಂದ ರಾಜೀನಾಮೆ ಪಡೆಯಲಾಗಿತ್ತು ಎಂದು ಸ್ಪಷ್ಟಪಡಿಸಿದರು. ಸಚಿವರ ಈ ಹೇಳಿಕೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ವೈರಲ್ ಆಗಿದ್ದು, ವಿಪಕ್ಷಗಳ ಕೈಗೆ ಅಸ್ತ್ರವಾದಂತಾಗಿದೆ. ಈ ವೇಳೆ ಸಚಿವರ ಪಕ್ಕದಲ್ಲಿದ್ದ ಶಾಸಕರು ತಕ್ಷಣವೇ ಹೇಳಿಕೆಯನ್ನು ಸರಿಪಡಿಸಿಕೊಳ್ಳುವಂತೆ ಸೂಚಿಸಿದರು. ಬಳಿಕ ಎಚ್ಚೆತ್ತ ಶಿವಲಿಂಗೇಗೌಡ ತಮ್ಮ ಮಾತನ್ನು ತಿದ್ದಿಕೊಂಡು, ನಾಗೇಂದ್ರ ಅವರು ಆರೋಪಿ ಇರಬಹುದೆಂಬ ಶಂಕೆ ಇದ್ದ ಹಿನ್ನೆಲೆಯಲ್ಲಿ ರಾಜೀನಾಮೆ ಪಡೆಯಲಾಗಿತ್ತು ಎಂದು ವಿವರಣೆ ನೀಡಿದರು. ನಾಗೇಂದ್ರ ಅವರ ರಾಜೀನಾಮೆಗೆ ಬಿಜೆಪಿ ಪಟ್ಟು ಹಿಡಿದಿರುವ ಪ್ರಸ್ತುತ ಸಂದರ್ಭದಲ್ಲಿ ಸಚಿವರ ಈ ಹೇಳಿಕೆ ಕಾಂಗ್ರೆಸ್ ಅಂಗಳದಲ್ಲಿ ಮುಜುಗರ ಸೃಷ್ಟಿಸಿದೆ.