image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ರಾಜ್ಯ

ಕೊಪ್ಪಳ ಜಾನುವಾರಿಗೆ ಅಧಿಕೃತ ತಳಿ ಮಾನ್ಯತೆ: ರಾಜ್ಯಕ್ಕೆ ಹೆಮ್ಮೆಯ ಕ್ಷಣ

ಕೊಪ್ಪಳ ಜಾನುವಾರಿಗೆ ಅಧಿಕೃತ ತಳಿ ಮಾನ್ಯತೆ: ರಾಜ್ಯಕ್ಕೆ ಹೆಮ್ಮೆಯ ಕ್ಷಣ

ಕೊಪ್ಪಳ: ಕೊಪ್ಪಳ ಜಿಲ್ಲೆಯ ವಿಶಿಷ್ಟ ಹಿಂಡು ದನಗಳಿಗೆ ರಾಷ್ಟ್ರೀಯ ಮಟ್ಟದಲ್ಲಿ ಅಧಿಕೃತ ‘ತಳಿ’ ಮಾನ್ಯತೆ ದೊರೆಯುವ ಮೂಲಕ ಕರ್ನಾಟಕದ ಪಶು ವೈದ್ಯಕೀಯ ಕ್ಷೇತ್ರಕ್ಕೆ ಹಾಗೂ ಪಶುಪಾಲಕ ಸಮುದಾಯಕ್ಕೆ ಹೊಸ ಹೆಮ್ಮೆಯ ಕ್ಷಣ ಲಭಿಸಿದೆ. ಬೀದರ್‌ನ ಕರ್ನಾಟಕ ಪಶುವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ (ಕೆವಿಎಎಫ್‌ಎಸ್‌ಯು) ವಿಜ್ಞಾನಿಗಳ ಸುಮಾರು ಐದು ವರ್ಷಗಳ ನಿರಂತರ ವೈಜ್ಞಾನಿಕ ಸಂಶೋಧನೆ, ಕ್ಷೇತ್ರ ಸಮೀಕ್ಷೆ ಮತ್ತು ದೈಹಿಕ ಲಕ್ಷಣಗಳ ಮೌಲ್ಯಮಾಪನದ ಫಲವಾಗಿ, ಕರ್ನಾಲ್‌ನ ಐಸಿಎಆರ್-ರಾಷ್ಟ್ರೀಯ ಪ್ರಾಣಿ ತಳಿ ಸಂಪನ್ಮೂಲಗಳ ಬ್ಯೂರೋ (ಎನ್‌ಬಿಎಜಿಆರ್) ಈ ಜಾನುವಾರುಗಳಿಗೆ ಅಧಿಕೃತ ತಳಿ ನೋಂದಣಿ ಮಾನ್ಯತೆ ನೀಡಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ.

ಇದರೊಂದಿಗೆ ಅಮೃತಮಹಲ್, ಹಳ್ಳಿಕಾರ್, ಖಿಲ್ಲಾರ್, ದೇವಣಿ, ಮಲನಾಡಗಿಡ್ಡ ಹಾಗೂ ಕೃಷ್ಣವೇಣಿ ಜಾನುವಾರು ತಳಿಗಳ ನಂತರ ಕರ್ನಾಟಕದಲ್ಲಿ ಅಧಿಕೃತವಾಗಿ ಗುರುತಿಸಲ್ಪಟ್ಟ 7ನೇ ಜಾನುವಾರು ತಳಿ ಎಂಬ ಹೆಗ್ಗಳಿಕೆಗೆ ಕೊಪ್ಪಳ ಜಾನುವಾರು ಪಾತ್ರವಾಗಿದೆ. ಕೃಷ್ಣಾ ಮತ್ತು ತುಂಗಭದ್ರಾ ನದಿ ಜಲಾನಯನ ಪ್ರದೇಶಗಳಲ್ಲಿ ತಲೆತಲಾಂತರಗಳಿಂದ ಬೆಳೆದುಬಂದಿರುವ ಈ ತಳಿಯು ಅತ್ಯಂತ ಕಠಿಣ ಹಾಗೂ ಅರೆ-ಶುಷ್ಕ ಹವಾಮಾನ ಪರಿಸ್ಥಿತಿ ತಡೆದುಕೊಳ್ಳುವ ಅಪಾರ ಸಹಿಷ್ಣುತೆ ಹೊಂದಿದೆ. ಶೂನ್ಯ ಒಳಹೂಡಿಕೆ ನಿರ್ವಹಣೆ, ಬಲವಾದ ದುಡಿಯುವ ಸಾಮರ್ಥ್ಯ, ಕಳಪೆ ಮೇವನ್ನೂ ಬಳಸಿಕೊಳ್ಳುವ ಕೌಶಲ್ಯ ಹಾಗೂ ಋತುಮಾನಿಕ ವಲಸೆ ಮೇಯಿಸುವಿಕೆಗೆ ಈ ತಳಿ ಅತ್ಯಂತ ಸೂಕ್ತವಾಗಿದೆ.

ಸ್ಥಳೀಯ ಲಿಂಗಾಯತ, ಕುರುಬ, ಗೊಲ್ಲ, ಎಸ್‌ಸಿ ಮತ್ತು ಎಸ್‌ಟಿ ಸಮುದಾಯಗಳ ಪಶುಪಾಲಕರು 200 ರಿಂದ 1,200 ಜಾನುವಾರುಗಳ ದೊಡ್ಡ ಹಿಂಡುಗಳನ್ನು ನಿರ್ವಹಿಸುತ್ತಿದ್ದು, ಮಣ್ಣಿನ ಫಲವತ್ತತೆ ಹೆಚ್ಚಿಸುವ ಸಾಂಪ್ರದಾಯಿಕ 'ಕೊಟ್ಟಿಗೆ ಹಾಕುವ' (ಫೀಲ್ಡ್ ಪೆನ್ನಿಂಗ್) ಪದ್ಧತಿಯ ಮೂಲಕ ರೈತರ ಜೀವನೋಪಾಯಕ್ಕೆ ಪ್ರಮುಖ ಬೆಂಬಲವಾಗಿವೆ. ಈ ತಳಿಯ ಆನುವಂಶಿಕ ಗುಣಲಕ್ಷಣಗಳ ಅಧ್ಯಯನ, ಸಂರಕ್ಷಣೆ ಮತ್ತು ತಳಿ ಅಭಿವೃದ್ಧಿಗೆ ಜಿಲ್ಲಾಡಳಿತ ಹಾಗೂ ಪಶುಸಂಗೋಪನೆ ಇಲಾಖೆ ಸಂಪೂರ್ಣ ಬೆಂಬಲ ನೀಡಲಿದೆ ಎಂದು ಕೊಪ್ಪಳ ಜಿಲ್ಲಾಧಿಕಾರಿ ಡಾ. ಸುರೇಶ ಬಿ. ಇಟ್ನಾಳ ಸಂತಸ ವ್ಯಕ್ತಪಡಿಸಿದ್ದಾರೆ. ಈ ಐತಿಹಾಸಿಕ ಸಾಧನೆಗೆ ಕಾರಣರಾದ ಪ್ರಧಾನ ಸಂಶೋಧಕರಾದ ಡಾ. ಕೊಟ್ರೇಶ್ ಪ್ರಸಾದ್, ಡಾ. ಬಸವರಾಜ ಇನಾಮದಾರ ಹಾಗೂ ಸಹಯೋಗಿ ವಿಜ್ಞಾನಿಗಳ ತಂಡದ ಶ್ರಮವನ್ನು ಇಲಾಖೆಯ ಅಧಿಕಾರಿಗಳು ಮತ್ತು ರೈತ ಸಮುದಾಯ ಮುಕ್ತಕಂಠದಿಂದ ಶ್ಲಾಘಿಸಿದೆ.

Category
ಕರಾವಳಿ ತರಂಗಿಣಿ