image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ರಾಜ್ಯ

ಅಂಬೇಡ್ಕರ್ ಭವನ ನಿರ್ಮಾಣಕ್ಕೆ ₹5 ಕೋಟಿ ಅನುದಾನ: ಸಚಿವ ಕೆ.ಹೆಚ್. ಮುನಿಯಪ್ಪ ಭರವಸೆ

ಅಂಬೇಡ್ಕರ್ ಭವನ ನಿರ್ಮಾಣಕ್ಕೆ ₹5 ಕೋಟಿ ಅನುದಾನ: ಸಚಿವ ಕೆ.ಹೆಚ್. ಮುನಿಯಪ್ಪ ಭರವಸೆ

ಬೆಂಗಳೂರು : ಸುರತ್ಕಲ್ ಹೋಬಳಿಯ ಕುಂಜತ್‌ಬೈಲ್ ಗ್ರಾಮದಲ್ಲಿ ಅಂಬೇಡ್ಕರ್ ಭವನ ನಿರ್ಮಾಣಕ್ಕಾಗಿ ₹5 ಕೋಟಿ ಅನುದಾನ ಬಿಡುಗಡೆ ಮಾಡುವಂತೆ ವಿಧಾನ ಪರಿಷತ್ತಿನ ಶಾಸಕರಾದ ಐವನ್ ಡಿ’ಸೋಜಾ ಅವರ ನೇತೃತ್ವದ ಜಿಲ್ಲಾ ಅದಿದ್ರಾವಿಡ ಸಮಾಜ ಸೇವಾ ಸಂಘದ ನಿಯೋಗವು ಸಮಾಜ ಕಲ್ಯಾಣ ಸಚಿವ ಕೆ.ಹೆಚ್. ಮುನಿಯಪ್ಪ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದೆ. ಸುಮಾರು ₹5 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಳ್ಳಲಿರುವ ಈ ಭವನದಲ್ಲಿ ಭವ್ಯ ಸಭಾಂಗಣ, ಮಿನಿ ಹಾಲ್, ಸಹಕಾರಿ ಸಂಘದ ಕೌಶಲ್ಯಾಭಿವೃದ್ಧಿ ಹಾಗೂ ತರಬೇತಿ ಕೇಂದ್ರ, ಮಹಿಳಾ ಘಟಕದ ಕಚೇರಿ, ಕುಲದೈವದ ಅಧ್ಯಯನ ಕೇಂದ್ರ ಸೇರಿದಂತೆ ಸಮುದಾಯದ ಅಭಿವೃದ್ಧಿಗೆ ಪೂರಕವಾದ ವಿವಿಧ ಮೂಲಸೌಕರ್ಯಗಳನ್ನು ಕಲ್ಪಿಸಲು ಉದ್ದೇಶಿಸಲಾಗಿದೆ ಎಂದು ಐವನ್ ಡಿ’ಸೋಜಾ ಅವರು ಸಚಿವರ ಗಮನಕ್ಕೆ ತಂದರು. ಈ ನಿಯೋಗದಲ್ಲಿ ಸಂಘದ ಅಧ್ಯಕ್ಷರಾದ ರಘುನಾಥ್ ಅತ್ತಾವರ, ಸಂಜೀವ ಕೋಟ್ಯಾನ್, ಆನಂದ್ ಅತ್ತಾವರ, ಈಶ್ವರ್, ಅವಿನಾಶ್ ಕುಂಜತ್‌ಬೈಲ್ ಹಾಗೂ ಪ್ರಶಾಂತ್ ಉಪಸ್ಥಿತರಿದ್ದರು.

ನಿಯೋಗದ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿದ ಸಚಿವ ಕೆ.ಹೆಚ್. ಮುನಿಯಪ್ಪ ಅವರು ಮುಂದಿನ 15 ದಿನಗಳೊಳಗಾಗಿ ಸೂಕ್ತ ತೀರ್ಮಾನ ಕೈಗೊಂಡು ಅಗತ್ಯ ಅನುದಾನ ಬಿಡುಗಡೆ ಮಾಡುವುದಾಗಿ ಭರವಸೆ ನೀಡಿದ್ದಾರೆ. ಸಮುದಾಯದ ಶೈಕ್ಷಣಿಕ, ಸಾಮಾಜಿಕ ಹಾಗೂ ಆರ್ಥಿಕ ಅಭಿವೃದ್ಧಿಗೆ ಪೂರಕವಾಗುವ ಈ ಯೋಜನೆಗೆ ಸಚಿವರು ನೀಡಿದ ಭರವಸೆಗೆ ಐವನ್ ಡಿ’ಸೋಜಾ ಅವರು ಸಂತಸ ವ್ಯಕ್ತಪಡಿಸಿದ್ದು, ನಿಯೋಗದ ಸದಸ್ಯರು ಸಚಿವರಿಗೆ ಧನ್ಯವಾದ ಸಲ್ಲಿಸಿದರು.

 

Category
ಕರಾವಳಿ ತರಂಗಿಣಿ