image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ರಾಜ್ಯ

ಕೆಪಿಎಸ್‌ಸಿ ಅಕ್ರಮ ತನಿಖೆ: ಹೈಕೋರ್ಟ್‌ಗೆ ದಾಖಲೆ ಸಲ್ಲಿಸಲು ಸರ್ಕಾರಕ್ಕೆ ಆದೇಶ

ಕೆಪಿಎಸ್‌ಸಿ ಅಕ್ರಮ ತನಿಖೆ: ಹೈಕೋರ್ಟ್‌ಗೆ ದಾಖಲೆ ಸಲ್ಲಿಸಲು ಸರ್ಕಾರಕ್ಕೆ ಆದೇಶ

ಬೆಂಗಳೂರು: ಕರ್ನಾಟಕ ಲೋಕಸೇವಾ ಆಯೋಗದ (ಕೆಪಿಎಸ್‌ಸಿ) ನೇಮಕಾತಿ ಪ್ರಕ್ರಿಯೆಯಲ್ಲಿ ನಡೆಯುತ್ತಿರುವ ಅಕ್ರಮಗಳು ಸಂಪೂರ್ಣವಾಗಿ ನಿಲ್ಲಬೇಕು ಎಂದು ಹೈಕೋರ್ಟ್ ಸ್ಪಷ್ಟಪಡಿಸಿದೆ. ಪಶುವೈದ್ಯಾಧಿಕಾರಿ ನೇಮಕಾತಿ ಅಕ್ರಮ ಹಾಗೂ ಕೆಪಿಎಸ್‌ಸಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್ ಅವರ ಪುತ್ರಿ ಸುಮಾ ಅವರು ಸುಳ್ಳು ಜಾತಿ ಮತ್ತು ಆದಾಯ ಪ್ರಮಾಣಪತ್ರ ಸಲ್ಲಿಸಿ ಕೈಗಾರಿಕಾ ವಿಸ್ತರಣಾಧಿಕಾರಿ ಹುದ್ದೆಗೆ ನೇಮಕಗೊಳ್ಳಲು ಯತ್ನಿಸಿದ ಆರೋಪದ ಪ್ರಕರಣಕ್ಕೆ ಸಂಬಂಧಿಸಿದ ಎಲ್ಲಾ ತನಿಖಾ ದಾಖಲೆಗಳನ್ನು ನ್ಯಾಯಾಲಯಕ್ಕೆ ಸಲ್ಲಿಸುವಂತೆ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿದೆ.

ನೇಮಕಾತಿ ಅಕ್ರಮವನ್ನು ಸಿಬಿಐ ತನಿಖೆಗೆ ವಹಿಸುವಂತೆ ಕೋರಿ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್ ಹಾಗೂ ಡಾ. ಮಂಜುನಾಥ್‌ ಸಲ್ಲಿಸಿರುವ ಅರ್ಜಿ ಮತ್ತು ತಮ್ಮ ವಿರುದ್ಧದ ಎಫ್‌ಐಆರ್ ರದ್ದು ಕೋರಿ ಅಭ್ಯರ್ಥಿ ಲೋಕೇಶ್‌ ಸೇರಿದಂತೆ ಇತರರು ಸಲ್ಲಿಸಿರುವ ಅರ್ಜಿಗಳ ವಿಚಾರಣೆಯನ್ನು ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರ ಪೀಠ ನಡೆಸಿತು. ವಿಚಾರಣೆ ವೇಳೆ ಅಭ್ಯರ್ಥಿಗಳ ಪರ ವಕೀಲರು, ಜಾರಿ ನಿರ್ದೇಶನಾಲಯ (ಇ.ಡಿ) ಅರ್ಜಿದಾರರ ಮನೆಗಳಲ್ಲಿ ಶೋಧ ನಡೆಸಿದ್ದರಿಂದ ಹಾಗೂ ಎಫ್‌ಐಆರ್ ಬಾಕಿ ಇರುವ ಕಾರಣ ಅರ್ಹ ಅಭ್ಯರ್ಥಿಗಳಿಗೆ ಉದ್ಯೋಗ ಸಿಗುತ್ತಿಲ್ಲ ಎಂದು ಕಳವಳ ವ್ಯಕ್ತಪಡಿಸಿದರು. ಕೆಪಿಎಸ್‌ಸಿ ಅಧ್ಯಕ್ಷ ಶಿವಶಂಕರಪ್ಪ ಅವರ ಮನೆಯಲ್ಲಿ ಇ.ಡಿ ಶೋಧ ನಡೆಸಿರುವುದನ್ನು ಸರ್ಕಾರಿ ಅಭಿಯೋಜಕರು ಸಹ ದೃಢಪಡಿಸಿದರು.

ಈ ವೇಳೆ ಪ್ರತಿಕ್ರಿಯಿಸಿದ ನ್ಯಾಯಪೀಠವು, ಕೆಪಿಎಸ್‌ಸಿ ನೇಮಕಾತಿಯಲ್ಲಿ ಅಕ್ರಮಗಳು ನಿಲ್ಲಲೇಬೇಕು ಹಾಗೂ ಈ ಎಲ್ಲಾ ಸಂಗತಿಗಳನ್ನು ಪರಿಶೀಲಿಸಿ ಸಮಸ್ಯೆಯನ್ನು ಅಂತಿಮವಾಗಿ ಪರಿಹರಿಸಲಾಗುವುದು ಎಂದು ತಿಳಿಸಿತು. ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಐಡಿ ಮತ್ತು ವಿಧಾನಸೌಧ ಪೊಲೀಸರು ನಡೆಸಿರುವ ತನಿಖೆಯ ಸಂಪೂರ್ಣ ದಾಖಲೆಗಳನ್ನು ಸಲ್ಲಿಸುವಂತೆ ಸೂಚಿಸಿದ ಕೋರ್ಟ್, ಸರ್ಕಾರದ ಆಕ್ಷೇಪಣೆ ಸಲ್ಲಿಕೆಗೆ ಸೋಮವಾರದವರೆಗೆ ಸಮಯ ನೀಡಿ ವಿಚಾರಣೆಯನ್ನು ಆಗಸ್ಟ್ 27ಕ್ಕೆ ಮುಂದೂಡಿದೆ.

Category
ಕರಾವಳಿ ತರಂಗಿಣಿ