image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ರಾಜ್ಯ

ಬೆಂಗಳೂರಿನ 2ನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ: 3 ಸ್ಥಳಗಳು ಶಾರ್ಟ್‌ಲಿಸ್ಟ್!

ಬೆಂಗಳೂರಿನ 2ನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ: 3 ಸ್ಥಳಗಳು ಶಾರ್ಟ್‌ಲಿಸ್ಟ್!

ಬೆಂಗಳೂರು : ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ದಿನೇ ದಿನೇ ಹೆಚ್ಚುತ್ತಿರುವ ವಿಮಾನಯಾನ ದಟ್ಟಣೆ ನಿಯಂತ್ರಿಸಲು ಯೋಜಿಸಲಾಗಿರುವ ಎರಡನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ನಿರ್ಮಾಣಕ್ಕಾಗಿ ಪ್ರಾಥಮಿಕವಾಗಿ ಮೂರು ಪ್ರಮುಖ ಸ್ಥಳಗಳನ್ನು ಶಾರ್ಟ್‌ಲಿಸ್ಟ್ ಮಾಡಲಾಗಿದೆ. ವಿಧಾನಸಭೆ ಅಧಿವೇಶನದಲ್ಲಿ ಬಿಜೆಪಿ ಶಾಸಕ ಡಾ. ಶೈಲೇಂದ್ರ ಬೆಲ್ದಾಳೆ ಅವರ ಪ್ರಶ್ನೆಗೆ ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಮೂಲಸೌಲಭ್ಯ ಅಭಿವೃದ್ಧಿ ಸಚಿವ ಎಂ.ಬಿ. ಪಾಟೀಲ್ ಅವರು ನೀಡಿದ ಲಿಖಿತ ಉತ್ತರದಲ್ಲಿ ಈ ಕುರಿತು ಸಮಗ್ರ ಮಾಹಿತಿ ಹಂಚಿಕೊಂಡಿದ್ದಾರೆ.

ಸರ್ಕಾರವು ಪರಿಶೀಲಿಸುತ್ತಿರುವ ಮೂರು ಪ್ರಮುಖ ಸ್ಥಳಗಳಲ್ಲಿ ಬೆಂಗಳೂರು ದಕ್ಷಿಣ ಜಿಲ್ಲೆಯ ಕನಕಪುರ ರಸ್ತೆಯ ಸೋಮನಹಳ್ಳಿ, ಕನಕಪುರ ತಾಲೂಕು ವ್ಯಾಪ್ತಿಯ ಚೂಡಹಳ್ಳಿ ಹಾಗೂ ನೆಲಮಂಗಲ-ಕುಣಿಗಲ್ ಹೆದ್ದಾರಿ ಸಮೀಪದ ಗುಡೇಮಾರನಹಳ್ಳಿ ಸೇರಿವೆ. ಇವುಗಳ ಜೊತೆಗೆ, ಕನಕಪುರ ರಸ್ತೆಯ ಹಾರೋಹಳ್ಳಿ ಕೈಗಾರಿಕಾ ಪ್ರದೇಶದ ಆಸುಪಾಸಿನಲ್ಲೂ ಭೂ ಪರಿಶೀಲನೆ ಕಾರ್ಯ ಪ್ರಗತಿಯಲ್ಲಿದ್ದು, ಸ್ಥಳ ಅಂತಿಮಗೊಂಡ ನಂತರವೇ ಯೋಜನೆಗೆ ಅಗತ್ಯವಿರುವ ಒಟ್ಟು ಜಮೀನಿನ ಪ್ರಮಾಣವನ್ನು ನಿರ್ಧರಿಸಲಾಗುವುದು.

ಯೋಜನೆಯ ಮೂಲಸೌಕರ್ಯ ಸಿದ್ಧತೆಗಳು ವೇಗವಾಗಿ ನಡೆಯುತ್ತಿದ್ದು, ಗುರುತಿಸಲಾದ ಸ್ಥಳಗಳಿಗೆ ಕೇಂದ್ರ ನಾಗರಿಕ ವಿಮಾನಯಾನ ಸಚಿವಾಲಯದ ಸ್ಟೀರಿಂಗ್ ಕಮಿಟಿಯಿಂದ 'ಸೈಟ್ ಕ್ಲಿಯರೆನ್ಸ್' ಪಡೆಯಲು ಈಗಾಗಲೇ ಅರ್ಜಿ ಸಲ್ಲಿಸಲಾಗಿದೆ. ಭಾರತೀಯ ವಿಮಾನ ನಿಲ್ದಾಣಗಳ ಪ್ರಾಧಿಕಾರದ (AAI) ತಾಂತ್ರಿಕ ತಂಡವು ಸ್ಥಳ ಪರಿಶೀಲನೆ ಪೂರ್ಣಗೊಳಿಸಿದ್ದು, ಪೂರ್ವ ಕಾರ್ಯಸಾಧ್ಯತಾ ವರದಿಯನ್ನೂ ಸರ್ಕಾರಕ್ಕೆ ಸಲ್ಲಿಸಿದೆ. ಈ ಸ್ಥಳಗಳ ತಾಂತ್ರಿಕ ಸಾಧ್ಯಾಸಾಧ್ಯತೆ, ಭೂ ಸೌಕರ್ಯ ಹಾಗೂ ಸಂಪರ್ಕ ವ್ಯವಸ್ಥೆಗಳನ್ನು ಸಮಗ್ರವಾಗಿ ಅಧ್ಯಯನ ಮಾಡಲು ಅಂತಾರಾಷ್ಟ್ರೀಯ ಮಟ್ಟದ ಸಮಾಲೋಚಕರನ್ನು ನೇಮಿಸಲಾಗಿದ್ದು, ಅವರ ಅಂತಿಮ ವರದಿ ಬಂದ ನಂತರವೇ ನೂತನ ವಿಮಾನ ನಿಲ್ದಾಣದ ಸ್ಥಳ ಅಧಿಕೃತವಾಗಿ ಹೊರಬೀಳಲಿದೆ.

Category
ಕರಾವಳಿ ತರಂಗಿಣಿ