ಬೆಂಗಳೂರು : ವಿಧಾನ ಪರಿಷತ್ತಿನಲ್ಲಿ ಕರ್ನಾಟಕ ವಿಧಾನ ಸಭೆಯ ಸಾರ್ವಜನಿಕ ಉದ್ದಿಮೆಗಳ ಸಮಿತಿಯ 139ನೇ ವರದಿಯನ್ನು ಸಮಿತಿಯ ಸದಸ್ಯರಾದ ಶ್ರೀ ಐವನ್ ಡಿಸೋಜಾ ಅವರು ಮಂಡಿಸಿದ್ದು, ಮಂಗಳೂರು ಮಹಾನಗರ ಪಾಲಿಕೆಯ ಸಮಗ್ರ ಒಳಚರಂಡಿ ಯೋಜನೆಗೆ ₹1,250 ಕೋಟಿ ಬಿಡುಗಡೆ ಮಾಡಲು ಸರ್ಕಾರಕ್ಕೆ ಪ್ರಮುಖ ಶಿಫಾರಸು ಮಾಡಿದ್ದಾರೆ. ನಗರಾಭಿವೃದ್ಧಿ ಇಲಾಖೆ ಹಾಗೂ ಕೆ.ಯು.ಐ.ಡಿ.ಎಫ್.ಸಿ ವತಿಯಿಂದ ಮಂಗಳೂರು ಮತ್ತು ಉಡುಪಿ ಜಿಲ್ಲೆಗಳಲ್ಲಿ ಕೈಗೊಂಡ ಕುಡಿಯುವ ನೀರು ಮತ್ತು ಒಳಚರಂಡಿ ಯೋಜನೆಗಳ ಸ್ಥಳ ಪರಿಶೀಲನೆ ನಡೆಸಿದ ನಂತರ ಈ ವರದಿಯನ್ನು ಸಿದ್ಧಪಡಿಸಲಾಗಿದೆ.
ಉಡುಪಿ ಜಿಲ್ಲೆಗೆ ಸಂಬಂಧಿಸಿದಂತೆ, ಯೋಜನೆಗಳಿಗೆ ಅಗತ್ಯವಿರುವ ಜಮೀನನ್ನು ಕಂದಾಯ ಇಲಾಖೆ ಹಾಗೂ ಜಿಲ್ಲಾಧಿಕಾರಿಗಳು ತ್ವರಿತವಾಗಿ ವಶಪಡಿಸಿಕೊಂಡು ಕಾಮಗಾರಿ ಶೀಘ್ರ ಪೂರ್ಣಗೊಳ್ಳಲು ಸಹಕರಿಸಬೇಕು ಎಂದು ವರದಿಯಲ್ಲಿ ತಿಳಿಸಲಾಗಿದೆ. ಜೊತೆಗೆ, ಹಾಲಾಡಿ ನೀರು ಸಂಸ್ಕರಣಾ ಘಟಕದ ಬಳಿಯ ಕೆಎನ್‌ಎನ್‌ಎಲ್ ಕಾಲುವೆಯಿಂದ ಜುಲೈ ನಂತರವೂ ಅಗತ್ಯ ನೀರನ್ನು ಬಳಸಲು ಅನುಮತಿ ನೀಡುವಂತೆ ಶಿಫಾರಸು ಮಾಡಲಾಗಿದೆ. ಮಂಗಳೂರಿನ ಚೇಳೂರು ಗ್ರಾಮದ ನಂದಿನಿ ನದಿಯಲ್ಲಿ ಆಚರಿಸಲಾಗುವ ಸುಮಾರು 800 ವರ್ಷಗಳ ಹಳೆಯ ಸಾಂಪ್ರದಾಯಿಕ 'ಕಂದೇವು ಆಯನ' ಮೀನುಗಾರಿಕೆ ಹಬ್ಬಕ್ಕೆ ಕೊಳಚೆ ನೀರಿನಿಂದ ತೀವ್ರ ಬೆದರಿಕೆ ಎದುರಾಗಿದೆ. ಸಂಸ್ಕರಿಸದ ಕೊಳಚೆ ನೀರು ನದಿಗೆ ಸೇರಿ ಅಂತರ್ಜಲ ಮಾಲಿನ್ಯ ಮತ್ತು ಸಾಮೂಹಿಕ ಮೀನುಗಳ ಸಾವಿಗೆ ಕಾರಣವಾಗುತ್ತಿದ್ದು, ನಂದಿನಿ ನದಿಯನ್ನು ರಕ್ಷಿಸಲು ಜಲ ಮಾಲಿನ್ಯ ತಡೆಯುವುದು ತುರ್ತು ಅಗತ್ಯವಾಗಿದೆ ಎಂದು ವರದಿ ಎಚ್ಚರಿಸಿದೆ.
ನಗರದ ಹಳೆಯ ಶಿಥಿಲಾವಸ್ಥೆಯಲ್ಲಿರುವ ಪೈಪ್‌ಗಳನ್ನು ಆಧುನಿಕ ಆರ್.ಸಿ.ಸಿ, ಯು.ಪಿ.ವಿ.ಸಿ ಹಾಗೂ ಡಿ.ಐ ಪೈಪ್‌ಗಳಾಗಿ ಬದಲಾಯಿಸುವುದು, ಹೊಸ ವೆಟ್ ವೆಲ್‌ಗಳ ನಿರ್ಮಾಣ ಮತ್ತು ಸಂಸ್ಕರಿಸಿದ ನೀರನ್ನು ಸಂಪೂರ್ಣವಾಗಿ ಮರುಬಳಕೆ ಮಾಡುವ ಯೋಜನೆಗಳಿಗೆ ಒಟ್ಟು ₹1,250 ಕೋಟಿ ವೆಚ್ಚದ ಅಗತ್ಯವಿದೆ. ಇದರಲ್ಲಿ ಒಳಚರಂಡಿ ಜಾಲದ ಪುನರುಜ್ಜಿವನಕ್ಕೆ ₹840 ಕೋಟಿ ಹಾಗೂ ಒಳಚರಂಡಿ ರಹಿತ ಪ್ರದೇಶಗಳ ಅಭಿವೃದ್ಧಿಗೆ ₹410 ಕೋಟಿ ವೆಚ್ಚವಾಗಲಿದೆ. ಸಾರ್ವಜನಿಕ ಆರೋಗ್ಯ ಸುಧಾರಣೆ ಹಾಗೂ ಸುಸ್ಥಿರ ನಗರಾಭಿವೃದ್ಧಿಯ ದೃಷ್ಟಿಯಿಂದ ಸರ್ಕಾರವು ಕಾಲಮಿತಿಯ ಕಾರ್ಯಯೋಜನೆ ಸಿದ್ಧಪಡಿಸಿ, ಯೋಜನೆಗೆ ಅಗತ್ಯ ಆಡಳಿತಾತ್ಮಕ ಅನುಮೋದನೆ ಹಾಗೂ ಅನುದಾನ ಹಂಚಿಕೆ ಮಾಡಬೇಕೆಂದು ಸಮಿತಿಯು ಶಿಫಾರಸು ಮಾಡಿದೆ.