ಬೆಂಗಳೂರು : ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ವಿಧಾನ ಪರಿಷತ್ ಸದಸ್ಯ ಡಾ. ರವಿ ಸಿ.ಟಿ. ಅವರು, ಕಾಂಗ್ರೆಸ್ ಪಕ್ಷವು 'ಜಿನ್ನಾ ಮನಸ್ಥಿತಿ'ಯನ್ನು ಪ್ರದರ್ಶಿಸುತ್ತಿದೆ ಎಂದು ತೀವ್ರವಾಗಿ ಟೀಕಿಸಿದ್ದಾರೆ. ಕೆಪಿಸಿಸಿ ಅಧ್ಯಕ್ಷರು 'ವಂದೇ ಮಾತರಂ' ಗೀತೆಯನ್ನು ಪೂರ್ತಿಯಾಗಿ ಹಾಡುವುದಿಲ್ಲ ಎಂಬ ನಿಲುವು ವ್ಯಕ್ತಪಡಿಸಿರುವುದನ್ನು ಉಲ್ಲೇಖಿಸಿದ ಅವರು, ಇಂತಹ ನಡೆ ರಾಷ್ಟ್ರಗಾನ ಹಾಗೂ ರಾಷ್ಟ್ರಗೀತೆಯ ಗೌರವಕ್ಕೆ ಧಕ್ಕೆ ತರುತ್ತದೆ ಎಂದು ಹೇಳಿದರು.
1971ರ 'ಪ್ರಿವೆನ್ಷನ್ ಆಫ್ ಇನ್ಸಲ್ಟ್ ಟು ನ್ಯಾಷನಲ್ ಹಾನರ್ ಆಕ್ಟ್' ಅಡಿಯಲ್ಲಿ ರಾಷ್ಟ್ರಧ್ವಜ, ಸಂವಿಧಾನ, ರಾಷ್ಟ್ರೀಯ ಸ್ಮಾರಕಗಳು, ರಾಷ್ಟ್ರಗೀತೆ ಹಾಗೂ ರಾಷ್ಟ್ರಗಾನಕ್ಕೆ ಅಪಮಾನ ಮಾಡುವುದು ಕಾನೂನುಬಾಹಿರವಾಗಿದ್ದು, ಇಂತಹ ಕೃತ್ಯಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದರು. 1971ರಲ್ಲಿ ಈ ಕಾಯ್ದೆಯನ್ನು ಸ್ವತಃ ಕಾಂಗ್ರೆಸ್ ಸರ್ಕಾರವೇ ಜಾರಿಗೆ ತಂದಿತ್ತು ಎಂದು ನೆನಪಿಸಿದ ಅವರು, ಸಂವಿಧಾನದ ಪುಸ್ತಕವನ್ನು ಹಿಡಿದುಕೊಂಡು ರಾಜಕೀಯ ನಾಟಕ ಮಾಡುವುದರಿಂದ ಮಾತ್ರ ಅದರ ಆಶಯ ಅರ್ಥವಾಗುವುದಿಲ್ಲ, ಅದರ ಅಡಿಯಲ್ಲಿರುವ ಕಾನೂನುಗಳ ತಿಳುವಳಿಕೆಯೂ ಇರಬೇಕು ಎಂದರು.
ಸ್ವಾತಂತ್ರ್ಯ ಹೋರಾಟದಲ್ಲಿ ಕೋಟ್ಯಂತರ ಜನರಿಗೆ ಪ್ರೇರಣೆಯಾಗಿದ್ದ 'ವಂದೇ ಮಾತರಂ' ಗೀತೆಯನ್ನು ತುಂಡು ಮಾಡುವ ಮೂಲಕ ಕಾಂಗ್ರೆಸ್ ಅಂದು ದೇಶ ವಿಭಜನೆಗೆ ಬುನಾದಿ ಹಾಕಿತ್ತು ಮತ್ತು ಇಂದು ಮತ್ತೆ ಅದೇ ಮನಸ್ಥಿತಿಯನ್ನು ತೋರುತ್ತಿದೆ ಎಂದು ಅವರು ಆರೋಪಿಸಿದರು. ಮಹಮ್ಮದ್ ಅಲಿ ಜಿನ್ನಾಗೆ ಇದ್ದ ಇಂತಹ ಮನೋಭಾವನೆಯೇ ಭಾರತ ವಿಭಜನೆಗೆ ಕಾರಣವಾಯಿತು ಎಂದು ತಿಳಿಸಿದ ಡಾ. ರವಿ, ಸಾರ್ವಜನಿಕ ಅಥವಾ ಸರ್ಕಾರಿ ಕಾರ್ಯಕ್ರಮಗಳಲ್ಲಿ ರಾಷ್ಟ್ರೀಯ ಸಂಕೇತಗಳಿಗೆ ಅಪಮಾನವಾದರೆ ವ್ಯಕ್ತಿ ಎಷ್ಟೇ ದೊಡ್ಡವರಾಗಿದ್ದರೂ ಕಾನೂನಿನನ್ವಯ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.