image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ರಾಜ್ಯ

23.14 ಲಕ್ಷ ಫಲಾನುಭವಿಗಳ ಪಿಂಚಣಿ ಸ್ಥಗಿತ: ಸರ್ಕಾರದಿಂದ ಸ್ಪಷ್ಟನೆ, ಅರ್ಹರಿಗೆ ಮರುಪಾವತಿಯ ಭರವಸೆ

23.14 ಲಕ್ಷ ಫಲಾನುಭವಿಗಳ ಪಿಂಚಣಿ ಸ್ಥಗಿತ: ಸರ್ಕಾರದಿಂದ ಸ್ಪಷ್ಟನೆ, ಅರ್ಹರಿಗೆ ಮರುಪಾವತಿಯ ಭರವಸೆ

ಬೆಂಗಳೂರು : ರಾಜ್ಯದಲ್ಲಿ ಸಾಮಾಜಿಕ ಭದ್ರತಾ ಯೋಜನೆಗಳ ಅಡಿಯಲ್ಲಿ ಮಾಸಿಕ ಪಿಂಚಣಿ ಪಡೆಯುತ್ತಿರುವ ಲಕ್ಷಾಂತರ ಬಡ ಫಲಾನುಭವಿಗಳಿಗೆ ಸರ್ಕಾರ ಮಹತ್ವದ ಸ್ಪಷ್ಟನೆ ನೀಡಿದೆ. ನಿಯಮಾನುಸಾರ ಆದಾಯ ಮಿತಿ ಹಾಗೂ ಇತರ ಮಾನದಂಡಗಳ ಉಲ್ಲಂಘನೆಯ ಶಂಕೆಯ ಮೇಲೆ 23.14 ಲಕ್ಷ ಫಲಾನುಭವಿಗಳ ಪಿಂಚಣಿಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದ್ದು, ದಾಖಲೆಗಳನ್ನು ಮರುಪರಿಶೀಲಿಸಿ ಅರ್ಹರಿರುವ ಪ್ರತಿಯೊಬ್ಬರಿಗೂ ಮತ್ತೆ ಪಿಂಚಣಿ ಮರುಪಾವತಿ ಮಾಡಲಾಗುವುದು ಎಂದು ಭರವಸೆ ನೀಡಲಾಗಿದೆ. ವಿಧಾನಸಭೆಯ ಕಲಾಪದಲ್ಲಿ ಶಾಸಕಿ ಎಂ. ರೂಪಕಲಾ ಅವರ ಪ್ರಶ್ನೆಗೆ ಉತ್ತರಿಸಿದ ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ಅವರು, ನಿಯಮಬಾಹಿರವಾಗಿ ಪಿಂಚಣಿ ಪಡೆಯುತ್ತಿದ್ದ 51,720 ಅನರ್ಹ ಫಲಾನುಭವಿಗಳ ಪಿಂಚಣಿಯನ್ನು ಸಂಪೂರ್ಣವಾಗಿ ರದ್ದುಪಡಿಸಲಾಗಿದೆ ಎಂದು ತಿಳಿಸಿದ್ದಾರೆ.

ಸ್ಥಗಿತಗೊಂಡಿರುವ ಪಿಂಚಣಿಯನ್ನು ಮರುಸ್ಥಾಪಿಸಲು ಫಲಾನುಭವಿಗಳು ವಯಸ್ಸಿನ ದೃಢೀಕರಣ ಪತ್ರ, ಆಧಾರ್ ಕಾರ್ಡ್, ಮತದಾರರ ಗುರುತಿನ ಚೀಟಿ, ಬಿಪಿಎಲ್ ಪಡಿತರ ಚೀಟಿ ಅಥವಾ ಆದಾಯ ಪ್ರಮಾಣಪತ್ರ, ಆಧಾರ್‌ಗೆ ಜೋಡಣೆಯಾಗಿರುವ ಬ್ಯಾಂಕ್ ಖಾತೆ ವಿವರ ಹಾಗೂ ಜೀವಿತಾವಧಿ ಪ್ರಮಾಣ ಪತ್ರಗಳನ್ನು ಸಲ್ಲಿಸಬೇಕಾಗಿದೆ. ಜನನ ಪ್ರಮಾಣ ಪತ್ರ ಇಲ್ಲದಿದ್ದರೆ ಸರ್ಕಾರಿ ಆಸ್ಪತ್ರೆಯ ವೈದ್ಯಕೀಯ ಮಂಡಳಿಯಿಂದ ವಯಸ್ಸಿನ ದೃಢೀಕರಣ ಪಡೆಯಬಹುದು. ವಿಕಲಚೇತನರು ಮತ್ತು ವೃದ್ಧರು ಕಚೇರಿಗಳಿಗೆ ಅಲೆದಾಡುವುದನ್ನು ತಪ್ಪಿಸಲು ಗ್ರಾಮ ಆಡಳಿತಾಧಿಕಾರಿಗಳು (VAO) ಫಲಾನುಭವಿಗಳ ಮನೆ ಬಾಗಿಲಿಗೇ ಭೇಟಿ ನೀಡಿ ಅಗತ್ಯ ದಾಖಲೆಗಳನ್ನು ಸಂಗ್ರಹಿಸಲಿದ್ದಾರೆ ಎಂದು ಸರ್ಕಾರ ಸ್ಪಷ್ಟಪಡಿಸಿದೆ.

ಮತ್ತೊಂದೆಡೆ, ಸರ್ಕಾರದ ಈ ದಿಢೀರ್ ಕ್ರಮದಿಂದಾಗಿ ಬಡವರು, ವಿಧವೆಯರು, ವಿಕಲಚೇತನರು ಹಾಗೂ ತೃತೀಯ ಲಿಂಗಿಗಳು ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ಆರೋಪಿಸಿ ಎಸ್‌ಯುಸಿಐ (ಕಮ್ಯುನಿಸ್ಟ್) ಪಕ್ಷವು ಆಗಸ್ಟ್ 31 ರಂದು ಧಾರವಾಡದಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಂಡಿದೆ. ವಾರ್ಷಿಕ ₹32,000 ಆದಾಯ ಮಿತಿಯ ಬದಲಿಗೆ ಬಿಪಿಎಲ್ ರೇಷನ್ ಕಾರ್ಡ್ ಅನ್ನೇ ಪ್ರಮುಖ ಮಾನದಂಡವಾಗಿ ಪರಿಗಣಿಸಬೇಕು ಹಾಗೂ ಮರುಪರಿಶೀಲನಾ ಪ್ರಕ್ರಿಯೆಯನ್ನು ಗ್ರಾಮ ಪಂಚಾಯಿತಿ ಮಟ್ಟದಲ್ಲೇ ಮಾಡಿಸಬೇಕು ಎಂದು ಎಸ್‌ಯುಸಿಐ ಮುಖಂಡ ರಾಮಾಂಜನಪ್ಪ ಆಲ್ದಳ್ಳಿ ಆಗ್ರಹಿಸಿದ್ದಾರೆ.

Category
ಕರಾವಳಿ ತರಂಗಿಣಿ