ಬೆಂಗಳೂರು : ಸರ್ಕಾರಿ ಶಾಲಾ ಮಕ್ಕಳಿಗೆ ನೀಡಲಾಗುತ್ತಿರುವ ಮೊಟ್ಟೆಯ ದರವನ್ನು ಪರಿಷ್ಕರಿಸುವ ಕುರಿತು ಶೀಘ್ರವೇ ಹಣಕಾಸು ಇಲಾಖೆಯೊಂದಿಗೆ ಚರ್ಚೆ ನಡೆಸಲಾಗುವುದು ಎಂದು ಶಾಲಾ ಶಿಕ್ಷಣ ಸಚಿವ ಮಧು ಬಂಗಾರಪ್ಪ ತಿಳಿಸಿದ್ದಾರೆ. ವಿಧಾನ ಪರಿಷತ್ತಿನ ಪ್ರಶ್ನೋತ್ತರ ಕಲಾಪದಲ್ಲಿ ಈ ವಿಷಯ ಪ್ರಸ್ತಾಪಿಸಿದ ಕಾಂಗ್ರೆಸ್ ಸದಸ್ಯ ರಾಮೋಜಿಗೌಡ, ಪ್ರಸ್ತುತ ಮಾರುಕಟ್ಟೆಯಲ್ಲಿ ಒಂದು ವರ್ಷದಿಂದ ಮೊಟ್ಟೆಯ ಬೆಲೆ 8 ರೂಪಾಯಿಗಿಂತ ಹೆಚ್ಚಾಗಿದೆ. ಆದರೆ ಸರ್ಕಾರ ನೀಡುತ್ತಿರುವ 6 ರೂಪಾಯಿಯಲ್ಲಿ ಶಾಲಾ ಮಟ್ಟಕ್ಕೆ ತಲುಪುತ್ತಿರುವುದು ಕೇವಲ 5 ರೂಪಾಯಿ ಮಾತ್ರ. ಇದರಿಂದಾಗಿ ಬಾಕಿ ಉಳಿಯುವ ಹಣವನ್ನು ಶಿಕ್ಷಕರೇ ತಮ್ಮ ಜೇಬಿನಿಂದ ಖರ್ಚು ಮಾಡಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಆದ್ದರಿಂದ ಮಾರುಕಟ್ಟೆ ದರಕ್ಕೆ ಅನುಗುಣವಾಗಿ ಹಣ ನೀಡಬೇಕು ಅಥವಾ ಮೊಟ್ಟೆ ವಿತರಣೆಯ ಜವಾಬ್ದಾರಿಯನ್ನು ಪ್ರತ್ಯೇಕ ಏಜೆನ್ಸಿಗೆ ವಹಿಸಬೇಕು ಎಂದು ಒತ್ತಾಯಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಚಿವ ಮಧು ಬಂಗಾರಪ್ಪ, ಈ ಕುರಿತು ಹಣಕಾಸು ಇಲಾಖೆಯೊಂದಿಗೆ ಮಾತುಕತೆ ನಡೆಸಿ ಸೂಕ್ತ ಪರಿಹಾರ ಕಂಡುಕೊಳ್ಳುವುದಾಗಿ ಭರವಸೆ ನೀಡಿದರು.