image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ರಾಜ್ಯ

ರಾಜ್ಯ ಸರ್ಕಾರದಿಂದ ₹150 ಕೋಟಿ ಸಹಾಯಧನ ಬಾಕಿ: ಆರ್ಥಿಕ ಸಂಕಷ್ಟದಲ್ಲಿ 176 ಖಾದಿ ಸಂಸ್ಥೆಗಳು

ರಾಜ್ಯ ಸರ್ಕಾರದಿಂದ ₹150 ಕೋಟಿ ಸಹಾಯಧನ ಬಾಕಿ: ಆರ್ಥಿಕ ಸಂಕಷ್ಟದಲ್ಲಿ 176 ಖಾದಿ ಸಂಸ್ಥೆಗಳು

ಹುಬ್ಬಳ್ಳಿ: ರಾಜ್ಯದಲ್ಲಿ ಖಾದಿ ಉದ್ಯಮವನ್ನು ಬೆಳೆಸುವುದಾಗಿ ಘೋಷಿಸುತ್ತಿರುವ ಸರ್ಕಾರವೇ ಖಾದಿ ಸಂಸ್ಥೆಗಳಿಗೆ ನೀಡಬೇಕಾದ ಪ್ರೋತ್ಸಾಹಧನ ಬಿಡುಗಡೆ ಮಾಡದೆ ಕಡೆಗಣಿಸಿದೆ. ಕಳೆದ 5-6 ವರ್ಷಗಳಿಂದ ಖಾದಿ ಉತ್ಪಾದನಾ ಸಂಸ್ಥೆಗಳಿಗೆ ನೀಡಬೇಕಾದ ಮಾರುಕಟ್ಟೆ ಅಭಿವೃದ್ಧಿ ಸಹಾಯಧನ (ಎಂಡಿಎ) ಹಾಗೂ ನೇಕಾರರ ಪ್ರೋತ್ಸಾಹಧನದ ಮೊತ್ತ ಸುಮಾರು ₹150 ಕೋಟಿಗೂ ಅಧಿಕ ಬಾಕಿ ಉಳಿದಿದ್ದು, ರಾಜ್ಯದಾದ್ಯಂತ ಖಾದಿ ಉತ್ಪಾದನಾ ಕೇಂದ್ರಗಳು ತೀವ್ರ ಆರ್ಥಿಕ ಬಿಕ್ಕಟ್ಟಿಗೆ ಸಿಲುಕಿವೆ.

ರಾಜ್ಯದಲ್ಲಿ ಸಣ್ಣ ಹಾಗೂ ದೊಡ್ಡ ಪ್ರಮಾಣದ ಒಟ್ಟು 176 ಖಾದಿ ಉತ್ಪಾದನಾ ಸಂಸ್ಥೆಗಳು ಕಾರ್ಯನಿರ್ವಹಿಸುತ್ತಿವೆ. ಇವುಗಳಲ್ಲಿ ಹುಬ್ಬಳ್ಳಿ-ಧಾರವಾಡ, ಬಾಗಲಕೋಟೆ ಹಾಗೂ ಬೆಂಗಳೂರಿನ ಪ್ರಮುಖ ಕೇಂದ್ರಗಳು ಸೇರಿವೆ. ದೇಶದಲ್ಲೇ ಏಕೈಕ ಬಿಐಎಸ್ (BIS) ಪ್ರಮಾಣೀಕೃತ ರಾಷ್ಟ್ರಧ್ವಜ ತಯಾರಿಕಾ ಘಟಕವಾಗಿರುವ ಹುಬ್ಬಳ್ಳಿಯ ಬೆಂಗೇರಿಯ ಕರ್ನಾಟಕ ಖಾದಿ ಗ್ರಾಮೋದ್ಯೋಗ ಸಂಯುಕ್ತ ಸಂಘ ಒಂದಕ್ಕೇ ರಾಜ್ಯ ಸರ್ಕಾರದಿಂದ ಬರಬೇಕಾದ ಪ್ರೋತ್ಸಾಹಧನ ಮತ್ತು ಎಂಡಿಎ ಮೊತ್ತವೇ ₹1.85 ಕೋಟಿಯಷ್ಟಿದೆ. ಸರ್ಕಾರದಿಂದ ಬರಬೇಕಾದ ಅನುದಾನ ಸ್ಥಗಿತಗೊಂಡಿರುವುದರಿಂದ ಸಂಸ್ಥೆಗಳ ದೈನಂದಿನ ಕಾರ್ಯಚಟುವಟಿಕೆಗಳು, ಕಾರ್ಮಿಕರ ಕೂಲಿ ಪಾವತಿ ಹಾಗೂ ಕಚ್ಚಾವಸ್ತುಗಳ ನಿರ್ವಹಣೆ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ.

ಸಾಮಾನ್ಯವಾಗಿ ಖಾದಿ ಉತ್ಪಾದನೆಯನ್ನು ಉತ್ತೇಜಿಸಲು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಜಂಟಿಯಾಗಿ ಒಟ್ಟು ಶೇ. 25ರಷ್ಟು ಮೊತ್ತವನ್ನು ಮಾರುಕಟ್ಟೆ ಅಭಿವೃದ್ಧಿ ಸಹಾಯಧನ ಹಾಗೂ ನೇಕಾರರ ಪ್ರೋತ್ಸಾಹಧನದ ರೂಪದಲ್ಲಿ ಒದಗಿಸುತ್ತವೆ. ಇದರಲ್ಲಿ ಕೇಂದ್ರ ಸರ್ಕಾರದ ಪಾಲು ಶೇ. 10ರಷ್ಟಿದ್ದರೆ, ರಾಜ್ಯ ಸರ್ಕಾರದ ಪಾಲು ಶೇ. 15ರಷ್ಟಿರುತ್ತದೆ. ಪ್ರಸ್ತುತ ಕೇಂದ್ರ ಸರ್ಕಾರವು ತನ್ನ ಪಾಲಿನ ಹಣವನ್ನು ಸಕಾಲದಲ್ಲಿ ಬಿಡುಗಡೆ ಮಾಡುತ್ತಿದ್ದರೂ, ರಾಜ್ಯ ಸರ್ಕಾರ ತನ್ನ ಪಾಲಿನ ಶೇ. 15ರ ಸಹಾಯಧನವನ್ನು 2019-20ನೇ ಸಾಲಿನಿಂದೀಚೆಗೆ ಸರಿಯಾಗಿ ಪಾವತಿಸಿಲ್ಲ. ರಾಜ್ಯ ಸರ್ಕಾರ ಪ್ರತಿ ವರ್ಷ ಬಜೆಟ್‌ನಲ್ಲಿ ಕೇವಲ ₹15 ರಿಂದ ₹20 ಕೋಟಿಗಳನ್ನು ಮಾತ್ರ ಘೋಷಣೆ ಮಾಡುತ್ತಿರುವುದರಿಂದ ವರ್ಷದಿಂದ ವರ್ಷಕ್ಕೆ ಬಾಕಿ ಮೊತ್ತ ಹೆಚ್ಚುತ್ತಲೇ ಸಾಗಿದೆ.

ಖಾದಿ ನೇಕಾರರು ಹಾಗೂ ಕಾರ್ಮಿಕರು ತೀರಾ ಕಡಿಮೆ ಮಜೂರಿಗೆ ಹಗಲಿರುಳು ಶ್ರಮಿಸುತ್ತಿದ್ದು, ಈ ಪ್ರೋತ್ಸಾಹಧನವೇ ಅವರ ಜೀವನೋಪಾಯಕ್ಕೆ ಪ್ರಮುಖ ಆಸರೆಯಾಗಿದೆ. ರಾಜ್ಯದಲ್ಲಿ ಈ ಕಸುಬನ್ನೇ ನೆಚ್ಚಿಕೊಂಡಿರುವ ಸುಮಾರು 25,000 ದಿಂದ 30,000 ಖಾದಿ ಕಾರ್ಯಕರ್ತರು ಮತ್ತು ನೇಕಾರರು ಇಂದು ಸಂಕಷ್ಟದ ಸ್ಥಿತಿಯಲ್ಲಿದ್ದಾರೆ. ಖಾದಿ ಮಂಡಳಿ ಹಾಗೂ ರಾಜ್ಯ ಸರ್ಕಾರಕ್ಕೆ ಹಲವಾರು ಬಾರಿ ಮನವಿ ಸಲ್ಲಿಸಿದರೂ ಸೂಕ್ತ ಸ್ಪಂದನೆ ಸಿಕ್ಕಿಲ್ಲ ಎಂದು ಸಂಸ್ಥೆಗಳ ಪ್ರತಿನಿಧಿಗಳು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು, ಸರ್ಕಾರ ಕೂಡಲೇ ಬಾಕಿ ಹಣವನ್ನು ಬಿಡುಗಡೆ ಮಾಡಿ ಖಾದಿ ಉದ್ಯಮವನ್ನು ರಕ್ಷಿಸಬೇಕೆಂದು ಆಗ್ರಹಿಸಿದ್ದಾರೆ.

Category
ಕರಾವಳಿ ತರಂಗಿಣಿ