image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

​ಆರ್‌ಎಸ್‌ಎಸ್‌ಗೂ ಅನ್ವಯಿಸುತ್ತೆ ಕಾನೂನು, ಹನೂರು ಶೂಟೌಟ್‌ಗೆ ನ್ಯಾಯಾಂಗ ತನಿಖೆ: ಸಿಎಂ ಡಿ.ಕೆ. ಶಿವಕುಮಾರ್

​ಆರ್‌ಎಸ್‌ಎಸ್‌ಗೂ ಅನ್ವಯಿಸುತ್ತೆ ಕಾನೂನು, ಹನೂರು ಶೂಟೌಟ್‌ಗೆ ನ್ಯಾಯಾಂಗ ತನಿಖೆ: ಸಿಎಂ ಡಿ.ಕೆ. ಶಿವಕುಮಾರ್

ಬೆಂಗಳೂರು : ಸರ್ಕಾರಿ ಜಾಗ ಹಾಗೂ ಮೈದಾನಗಳನ್ನು ಬಳಸಿಕೊಳ್ಳಲು ಪೂರ್ವಾನುಮತಿ ಕಡ್ಡಾಯಗೊಳಿಸುವ ವಿಧೇಯಕದ ವಿಚಾರದಲ್ಲಿ ಆರ್‌ಎಸ್‌ಎಸ್ ನಾಯಕ ಬಿ.ಎಲ್. ಸಂತೋಷ್ ನೀಡಿದ್ದ ಹೇಳಿಕೆಗೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಕೊಡಗಿನ ಭಾಗಮಂಡಲದಲ್ಲಿ ಪ್ರತ್ಯುತ್ತರ ನೀಡಿದ್ದಾರೆ. ಯಾರನ್ನೂ ಮನ ನೋಯಿಸಲು ಈ ಕಾನೂನು ತರುತ್ತಿಲ್ಲ, ಕೋರ್ಟ್ ಆದೇಶಗಳನ್ನು ಪಾಲಿಸಿ ಕಾನೂನು ರೂಪಿಸಲಾಗುತ್ತಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಬಿಜೆಪಿ, ಜೆಡಿಎಸ್ ಹಾಗೂ ಕಾಂಗ್ರೆಸ್ ಸೇರಿದಂತೆ ಯಾವುದೇ ಸಂಘಟನೆಯನ್ನೂ ಗುರಿಯಾಗಿಸಿಕೊಂಡಿಲ್ಲ. ಕಾನೂನಿನ ಚೌಕಟ್ಟಿನಲ್ಲಿ ಎಲ್ಲರೂ ಕಾರ್ಯನಿರ್ವಹಿಸಬೇಕು ಎಂದಿರುವ ಅವರು, ಫ್ರೀಡಂ ಹಬ್ಬಕ್ಕೂ ಸಚಿವ ಕೃಷ್ಣಭೈರೇಗೌಡರು ಅನುಮತಿ ಪಡೆದೇ ಕಾರ್ಯಕ್ರಮ ನಡೆಸಿದ್ದಾರೆ ಎಂದು ನೆನಪಿಸಿದರು.

ನಮ್ಮದೇ ಸರ್ಕಾರವಿದ್ದರೂ ನಾವು ಕಾನೂನು ದುರ್ಬಳಕೆ ಮಾಡಿಕೊಳ್ಳಲು ಸಾಧ್ಯವಿಲ್ಲ ಎಂದ ಸಿಎಂ, ಈ ಹಿಂದೆ 'ಭಾರತ್ ಜೋಡೋ' ಕಾರ್ಯಕ್ರಮದ ಸಂದರ್ಭದಲ್ಲೂ ಕೋರ್ಟ್ ನಿಯಮಾವಳಿಗಳ ಕಾರಣದಿಂದ ಫ್ರೀಡಂ ಪಾರ್ಕ್‌ನಿಂದ ಱಲಿ ಮಾಡಲು ಅವಕಾಶವಿರಲಿಲ್ಲ. ಹೀಗಾಗಿ ರಾಹುಲ್ ಗಾಂಧಿ ಹಾಗೂ ಮಲ್ಲಿಕಾರ್ಜುನ ಖರ್ಗೆ ಅವರ ಮನವೊಲಿಸಿ ಱಲಿ ಕೈಬಿಡಲಾಗಿತ್ತು ಎಂದರು. ಸ್ವಾತಂತ್ರ್ಯ ಸಂಗ್ರಾಮ ಹಾಗೂ ಸಂತೋಷ್ ಅವರ ಹೇಳಿಕೆಗಳ ಕುರಿತು ಮಾತನಾಡುತ್ತಾ, ಹಿರಿಯರ ಮಾತಿಗೂ ಗೌರವ ಕೊಡೋಣ ಆದರೆ ಮೊದಲಿನಿಂದಲೂ ಇರುವ ಕಾನೂನಿಗೆ ಗೌರವ ನೀಡಿ, ಅದನ್ನು ಪ್ರತಿಯೊಬ್ಬರೂ ಪಾಲಿಸಬೇಕು ಎಂದು ಸೂಚ್ಯವಾಗಿ ತಿಳಿಸಿದರು.

ಇದೇ ವೇಳೆ ಚಾಮರಾಜನಗರ ಜಿಲ್ಲೆಯ ಹನೂರು ಅರಣ್ಯ ಪ್ರದೇಶದಲ್ಲಿ ನಡೆದ ಶೂಟೌಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಅವರು, ಘಟನೆಯಲ್ಲಿ ಮೃತಪಟ್ಟವರು ಬೇಟೆಗೆ ತೆರಳಿದ್ದರು ಎಂಬ ಮಾಹಿತಿ ಬೆಳಿಗ್ಗೆಯೇ ತಮ್ಮ ಗಮನಕ್ಕೆ ಬಂದಿದೆ ಎಂದಿದ್ದಾರೆ. ಘಟನಾ ಸ್ಥಳದಿಂದ ಬಂದೂಕು ಹಾಗೂ ಎರಡು ಚೀಲ ಮಾಂಸವನ್ನು ವಶಪಡಿಸಿಕೊಳ್ಳಲಾಗಿದ್ದು, ಅರಣ್ಯ ಸಿಬ್ಬಂದಿಯ ಮೇಲೆ ದಾಳಿಯಾದಾಗ ಅವರು ರಕ್ಷಣೆಗಾಗಿ ಶೂಟ್ ಮಾಡಿದ್ದಾರೆ ಎಂಬ ಮಾಹಿತಿ ಲಭಿಸಿದೆ ಎಂದು ವಿವರಿಸಿದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ನ್ಯಾಯಾಂಗ (ಜೂಡಿಷಿಯಲ್) ತನಿಖೆಗೆ ಆದೇಶಿಸಲಾಗಿದ್ದು, ಮೃತಪಟ್ಟ ಮೂವರಿಗೂ ಪರಿಹಾರ ನೀಡುವ ಕುರಿತು ಮುಂದೆ ತೀರ್ಮಾನ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

Category
ಕರಾವಳಿ ತರಂಗಿಣಿ