image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ವಂದೇ ಮಾತರಂ ವಿವಾದ: ಸೋನಿಯಾ ವಿರುದ್ಧ ಅಮಿತ್‌ ಶಾ ತೀವ್ರ ವಾಗ್ದಾಳಿ

ವಂದೇ ಮಾತರಂ ವಿವಾದ: ಸೋನಿಯಾ ವಿರುದ್ಧ ಅಮಿತ್‌ ಶಾ ತೀವ್ರ ವಾಗ್ದಾಳಿ

ನವದೆಹಲಿ : ದೆಹಲಿಯ ಕಾಂಗ್ರೆಸ್ ಪ್ರಧಾನ ಕಚೇರಿಯಲ್ಲಿ ನಡೆದ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ 'ವಂದೇ ಮಾತರಂ' ಗೀತೆ ಹಾಡುತ್ತಿದ್ದಾಗ ಅದನ್ನು ಅರ್ಧಕ್ಕೇ ನಿಲ್ಲಿಸುವಂತೆ ಸೋನಿಯಾ ಗಾಂಧಿ ಸೂಚಿಸಿದ್ದಾರೆ ಎಂಬ ಆರೋಪ ದೊಡ್ಡ ರಾಜಕೀಯ ವಿವಾದಕ್ಕೆ ಕಾರಣವಾಗಿದೆ. ಗೀತೆ ಹಾಡುವಾಗ ಸೋನಿಯಾ ಗಾಂಧಿ ತೋರಿದ ವರ್ತನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಸಾರ್ವಜನಿಕರಿಂದ ಹಾಗೂ ಬಿಜೆಪಿ ನಾಯಕರಿಂದ ತೀವ್ರ ಆಕ್ಷೇಪ ವ್ಯಕ್ತವಾಗಿದೆ.

ಈ ಕುರಿತು ರಾಜಸ್ಥಾನದ ಚಿತ್ತೋರ್‌ಗಢದಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ತೀವ್ರವಾಗಿ ಪ್ರತಿಕ್ರಿಯಿಸಿದ ಕೇಂದ್ರ ಗೃಹ ಸಚಿವ ಅಮಿತ್‌ ಶಾ, ವಂದೇ ಮಾತರಂ ಗೀತೆಯನ್ನು ಮಧ್ಯದಲ್ಲೇ ನಿಲ್ಲಿಸುವಂತೆ ಸೂಚಿಸಿ ಸೋನಿಯಾ ಗಾಂಧಿ ದೊಡ್ಡ ಪಾಪ ಎಸಗಿದ್ದಾರೆ ಎಂದು ಕಿಡಿಕಾರಿದ್ದಾರೆ. ವೋಟ್‌ಬ್ಯಾಂಕ್ ರಾಜಕೀಯಕ್ಕಾಗಿ ಕಾಂಗ್ರೆಸ್ ರಾಷ್ಟ್ರೀಯ ಗೀತೆಯ ಮಹತ್ವ ಹಾಗೂ ಅದಕ್ಕಾಗಿ ನಡೆದ ತ್ಯಾಗಗಳನ್ನು ಮರೆತಿದೆ. ಸ್ವಾತಂತ್ರ್ಯ ಸಂಗ್ರಾಮದ ಅವಧಿಯಲ್ಲಿ ಸಾವಿರಾರು ಕ್ರಾಂತಿಕಾರಿಗಳು ಇದೇ ವಂದೇ ಮಾತರಂ ಗೀತೆ ಹಾಡುತ್ತಲೇ ಲಾಠಿ ಏಟು, ಗುಂಡುಗಳನ್ನು ಎದುರಿಸಿ ಜೈಲು ಶಿಕ್ಷೆ ಅನುಭವಿಸಿದ್ದರು. ಸೋನಿಯಾ ಗಾಂಧಿ ಅವರಿಗೆ ಕೊಂಚವಾದರೂ ನಾಚಿಕೆ ಇದ್ದರೆ, ಬಂಕಿಮಚಂದ್ರ ಚಟ್ಟೋಪಾಧ್ಯಾಯ ಅವರ ಅಮರ ಆತ್ಮಕ್ಕೆ ಹಾಗೂ ದೇಶದ ಜನರಿಗೆ ಕೈಮುಗಿದು ಕ್ಷಮೆಯಾಚಿಸಬೇಕು ಎಂದು ಶಾ ಆಗ್ರಹಿಸಿದ್ದಾರೆ.

ಮತ್ತೊಂದೆಡೆ, ಈ ಎಲ್ಲಾ ಆರೋಪಗಳನ್ನು ಕಾಂಗ್ರೆಸ್ ಸಂಪೂರ್ಣವಾಗಿ ತಳ್ಳಿಹಾಕಿದೆ. ಕಾಂಗ್ರೆಸ್ ವಕ್ತಾರ ಉದಿತ್ ರಾಜ್ ಹಾಗೂ ಪ್ರಮುಖ ನಾಯಕರು ಸ್ಪಷ್ಟನೆ ನೀಡಿ, ಸೋನಿಯಾ ಗಾಂಧಿ ಅವರು ಗೀತೆಯನ್ನು ನಿಲ್ಲಿಸಲು ಸೂಚಿಸಲಿಲ್ಲ. ಕಾರ್ಯಕ್ರಮದ ವೇಳೆ ದೀರ್ಘಕಾಲ ನಿಲ್ಲಲು ಸಾಧ್ಯವಾಗದಿದ್ದ ಪಕ್ಷದ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಕುರ್ಚಿ ವ್ಯವಸ್ಥೆ ಮಾಡುವಂತೆ ಅವರು ಕಾರ್ಯಕರ್ತರಿಗೆ ಸನ್ನೆ ಮಾಡುತ್ತಿದ್ದರು. ಬಿಜೆಪಿ ಮೂಲ ವಿಷಯಗಳಿಂದ ಸಾರ್ವಜನಿಕರ ಗಮನ ಬೇರೆಡೆಗೆ ಸೆಳೆಯಲು ನಕಲಿ ವಿವಾದ ಸೃಷ್ಟಿಸುತ್ತಿದೆ ಎಂದು ಕಾಂಗ್ರೆಸ್ ತಿರುಗೇಟು ನೀಡಿದೆ.

Category
ಕರಾವಳಿ ತರಂಗಿಣಿ