ಮಂಗಳೂರು: ದೇಶದ ಜನತೆ ಸ್ವಾತಂತ್ರ್ಯೋತ್ಸವವನ್ನು ಆಚರಿಸುವ ಸಂಭ್ರಮದಲ್ಲಿದ್ದರೆ, ಕರ್ನಾಟಕ ಸರ್ಕಾರದ ಸಚಿವರಾದ ಜಮೀರ್ ಅಹಮ್ಮದ್ ರವರಿಗೆ ತ್ರಿವರ್ಣ ಧ್ವಜಾರೋಹಣ ಮಾಡಲು ಸಮಯವಿಲ್ಲ ಎಂದು ಮುಖ್ಯಮಂತ್ರಿಗಳಿಗೆ ಪತ್ರ ಬರೆದಿರುವುದು ರಾಷ್ಟ್ರಕ್ಕೆ ಹಾಗೂ ಸಂವಿಧಾನಕ್ಕೆ ಮಾಡಿರುವ ಗಂಭೀರ ಅಗೌರವವಾಗಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ಅಧ್ಯಕ್ಷರಾದ ಸತೀಶ್ ಕುಂಪಲ ತೀವ್ರವಾಗಿ ಖಂಡಿಸಿದ್ದಾರೆ.
ಸಂವಿಧಾನದ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿದ ಸಚಿವರ ಈ ದುರ್ವರ್ತನೆಗೆ ಸಂವಿಧಾನದ ಪುಸ್ತಕವನ್ನು ಹಿಡಿದು ಪ್ರಮಾಣ ಮಾಡಿರುವ ನಾಯಕರು ಮೌನವಾಗಿರುವುದು ಶಕ್ತೀಹೀನತೆಯ ಲಕ್ಷಣವಾಗಿದೆ. ಧ್ವಜಾರೋಹಣದಂತಹ ಪವಿತ್ರ ಕರ್ತವ್ಯದಿಂದ ಹಿಂದೆ ಸರಿದಿರುವ ಜಮೀರ್ ಅಹಮ್ಮದ್ ರವರನ್ನು ತಕ್ಷಣವೇ ಸಚಿವ ಸಂಪುಟದಿಂದ ವಜಾಗೊಳಿಸುವ ಧೈರ್ಯವನ್ನು ಸರ್ಕಾರ ತೋರಬೇಕು ಎಂದು ಅವರು ಆಗ್ರಹಿಸಿದ್ದಾರೆ.
ಸ್ವಾತಂತ್ರ್ಯ ಸಂಗ್ರಾಮದಲ್ಲಿ ವಂದೇ ಮಾತರಂ ಗೀತೆಯ ಪಾತ್ರ ಮತ್ತು ಮಹತ್ವ ದೊಡ್ಡದಿದೆ. ದೇಶದ ಹೆಮ್ಮೆಯ ಪ್ರತೀಕವಾದ ತ್ರಿವರ್ಣ ಧ್ವಜವನ್ನು ಅರಳಿಸಲು ಸಮಯವಿಲ್ಲ ಎನ್ನುವ ಸಚಿವರನ್ನು ಒಳಗೊಂಡಿರುವ ಆಡಳಿತ ಸರ್ಕಾರಕ್ಕೆ ರಾಜ್ಯದ ಜನತೆ ಸೂಕ್ತ ಪಾಠ ಕಲಿಸಲಿದ್ದಾರೆ ಎಂದು ಎಚ್ಚರಿಕೆ ನೀಡಿದ್ದಾರೆ.