ಬೆಂಗಳೂರು: ರಾಜ್ಯ ವಿಧಾನಮಂಡಲ ಅಧಿವೇಶನ ಇಂದು ಆರಂಭಗೊಂಡಿದ್ದು, ವಿಧಾನ ಪರಿಷತ್‌ನ ನೂತನ ಸಭಾನಾಯಕರಾಗಿ ಸಚಿವ ಡಾ. ಯತೀಂದ್ರ ಸಿದ್ದರಾಮಯ್ಯ ಅವರನ್ನು ನೇಮಕ ಮಾಡಲಾಗಿದೆ. ಕಲಾಪ ಪ್ರಾರಂಭವಾಗುತ್ತಿದ್ದಂತೆ ಹಂಗಾಮಿ ಸಭಾಪತಿ ಪುಟ್ಟಣ್ಣ ಅವರು ಈ ಅಧಿಕೃತ ಘೋಷಣೆ ಮಾಡಿದರು.
ಘೋಷಣೆಯ ಬಳಿಕ ಕಲಾಪವನ್ನು ಉದ್ದೇಶಿಸಿ ಮಾತನಾಡಿದ ನೂತನ ಸಭಾನಾಯಕ ಡಾ. ಯತೀಂದ್ರ ಸಿದ್ದರಾಮಯ್ಯ, ತಮಗೆ ಮೊದಲ ಬಾರಿಗೆ ಸಚಿವ ಹಾಗೂ ಸಭಾನಾಯಕನ ಹೊಣೆಗಾರಿಕೆ ಸಿಕ್ಕಿರುವುದನ್ನು ಉಲ್ಲೇಖಿಸಿದರು. "ಸದನದ ಕಲಾಪ ನಿರ್ವಹಣೆಯಲ್ಲಿ ನನಗೆ ಅನುಭವ ಕಡಿಮೆಯಿದೆ. ಕಲಾಪಗಳ ಸಂದರ್ಭದಲ್ಲಿ ಏನಾದರೂ ಲೋಪದೋಷಗಳಾದರೆ ಅದನ್ನು ಸರಿಪಡಿಸಿ, ಸೂಕ್ತ ರೀತಿಯಲ್ಲಿ ಮಾರ್ಗದರ್ಶನ ನೀಡಬೇಕು" ಎಂದು ಆಡಳಿತ ಹಾಗೂ ವಿಪಕ್ಷಗಳ ಹಿರಿಯ ಸದಸ್ಯರಲ್ಲಿ ಮನವಿ ಮಾಡಿದರು.